ಇಸ್ಲಾಮಾಬಾದ್: ಜೈಲಿನಲ್ಲಿರುವ ತಾಲಿಬಾನ್ ಉಗ್ರರ ವಿರುದ್ಧ ಪಾಕಿಸ್ತಾನ ಸೇನೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸದಿದ್ದರೆ ಪೇಶಾವರ ಕೃತ್ಯಕ್ಕಿಂತಲೂ ದೊಡ್ಡ ಪ್ರಮಾಣದ ದಾಳಿ ನಡೆಸುವುದಾಗಿ ತೆಹ್ರೀಕ್-ಇ-ತಾಲಿಬಾನ್ ಮುಖಂಡ ಮೌಲಾನಾ ಫಜ್ಲುಲ್ಲಾ ಎಚ್ಚರಿಕೆ ನೀಡಿದ್ದಾನೆ.
ತಾಲಿಬಾನ್ ಉಗ್ರ ಸಂಘಟನೆ ನಿನ್ನೆ ಬಿಡುಗಡೆ ಮಾಡಿರುವ ಈ ನೂತನ ವಿಡಿಯೋದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಫಜ್ಲುಲ್ಲಾ ಹಲವು ಆರೋಪಗಳನ್ನು ಮಾಡಿದ್ದು, ಪಾಕಿಸ್ತಾನ ಸೇನೆ ಅಮಾಯಕ ಯುವಕರನ್ನು ಬಂಧಿಸಿಟ್ಟಿದ್ದು, ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ. ಪಾಕ್ ಸರ್ಕಾರ ಇದನ್ನು ಕೂಡಲೇ ನಿಲ್ಲಸದಿದ್ದರೆ ಅತ್ಯುಗ್ರ ದಾಳಿ ನಡೆಸಲಾಗುತ್ತದೆ ಎಂದು ಫಜ್ಲುಲ್ಲಾ ಹೇಳಿದ್ದಾನೆ.
ಇನ್ನು ಪೇಶಾವರ ಸೈನಿಕ ಶಾಲೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿರುವ ತಾಲಿಬಾನ್ ಮುಖಂಡ, ನಾವು ಮಕ್ಕಳನ್ನು ಕೇವಲ ಬಂಧಿಸಿಟ್ಟಿದ್ದೆವು. ಆದರೆ ಯಾವಾಗ ಪಾಕಿಸ್ತಾನ ಸೇನೆ ಏಕಾಏಕಿ ನಮ್ಮ ಮೇಲೆ ಗುಂಡಿನ ಮಳೆಗರೆಯಿತೋ ಅಗ ಅನಿವಾರ್ಯವಾಗಿ ಮಕ್ಕಳನ್ನು ಕೊಲ್ಲಬೇಕಾಯಿತು. ಆದರೂ ನಾವು ಕೊಂದಿದ್ದು, ಸೈನಿಕರ ಮಕ್ಕಳನ್ನು ಮಾತ್ರ. ಇವರು ಕೂಡ ಭವಿಷ್ಯದಲ್ಲಿ ಸೈನಿಕರಾಗಿ ನಮ್ಮ ವಿರುದ್ಧವೇ ಯುದ್ಧ ಸಾರಲಿದ್ದಾರೆ. ಹೀಗಾಗಿ ಇವರನ್ನು ಕೊಂದು ಹಾಕಿದೆವು ಎಂದು ತನ್ನ ಪೈಶಾಚಿಕ ಕೃತ್ಯಕ್ಕೆ ಸಮರ್ಥನೆ ನೀಡಿದ್ದಾನೆ.
ನಾನು ಪಾಕಿಸ್ತಾನ ಸರ್ಕಾರಕ್ಕೆ ನೀಡುತ್ತಿದ್ದು, ಜೈಲಿನಲ್ಲಿರುವ ಖೈದಿಗಳಿಗೆ ಹಿಂಸೆ ನೀಡಬಾರದು. ಇದನ್ನು ಮೀರಿ ನಡೆದರೆ ಪೇಶಾವರ ಘಟನೆ ಮರೆಯದಿರಿ, ಇದು ನಮ್ಮ-ನಿಮ್ಮ ನಡುವಿನ ಯುದ್ಧವಾಗಿದ್ದು, ನೀವು ನಮ್ಮ ಯೋಧರನ್ನು ಕೊಂದರೆ ನಾವು ನಿಮ್ಮ ಯೋಧರನ್ನು ಕೊಲ್ಲುತ್ತೇವೆ ಎಂದು ಫಜ್ಲುಲ್ಲಾ ಹೇಳಿದ್ದಾನೆ. ಇದೇ ವೇಳೆ ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ತನ್ನ ಭಂಟರಿಗೆ ಫಜ್ಲುಲ್ಲಾ ಸೂಚಿಸಿದ್ದಾನೆ.
ಆದರೆ ಪ್ರಸ್ತುತ ಮಾಧ್ಯಮಗಳಿಗೆ ತಾಲಿಬಾನ್ ಬಿಡುಗಡೆ ಮಾಡಿರುವ ಈ ವಿಡಿಯೋವನ್ನು ಯಾವಾಗ ಚಿತ್ರಿಸಲಾಗಿತ್ತು ಎಂಬುದು ತಿಳಿದುಬಂದಿಲ್ಲ.
ಕಳೆದ 2014 ಡಿಸೆಂಬರ್ 14ರಂದು ಪೇಶಾವರ ಸೈನಿಕ ಶಾಲೆ ಮೇಲೆ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು ಪುಟ್ಟ ಶಾಲಾ ಮಕ್ಕಳು ಸೇರಿದಂತೆ ಸುಮಾರು 149 ಮಂದಿಯ ಮಾರಣ ಹೋಮ ಮಾಡಿದ್ದರು. ಘಟನೆ ಬಳಿಕ ಎಚ್ಚೆತ್ತುಕೊಂಡಂತಿದ್ದ ಪಾಕಿಸ್ತಾನ ಸರ್ಕಾರ ಭಯೋತ್ಪಾದಕರ ಹುಟ್ಟಡಗಿಸಲು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಈ ವರೆಗೂ ತಾಲಿಬಾನ್‌ನ 5 ಕಮಾಂಡರ್‌ಗಳು ಸೇರಿದಂತೆ ಹತ್ತಾರು ಉಗ್ರರನ್ನು ಕೊಂದು ಹಾಕಿದೆ.