ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ಆರ್ಭಟ ಮುಂದುವರೆದಿದ್ದು, ತೀವ್ರ ಮಂಜಿನಿಂದಾಗಿ ರಾಜಧಾನಿ ದೆಹಲಿಯಲ್ಲಿ 33 ವಿಮಾನ ಮತ್ತು 41 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ.
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಕೇವಲ 50 ಮೀಟರ್‌ಗಳವರೆಗೆ ಮಾತ್ರ ರನ್ ವೇ ಕಾಣುತ್ತಿದ್ದು, ವಿಮಾನಗಳ ಪೈಲಟ್‌ಗಳಿಗೇ ರನ್ ವೇ ಕಾಣದಂತೆ ಮಂಜು ಮುಸುಕಿದೆ. ಹೀಗಾಗಿ ಸುಮಾರು 33 ವಿಮಾನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಈ ಪೈಕಿ 10 ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ವಿಳಂಬವಾಗಿದೆ. ಇನ್ನು ರೈಲು ಸಂಚಾರದಲ್ಲಿಯೂ ತೀವ್ರ ಅಡಚಣೆಯಾಗಿದ್ದು, ಸುಮಾರು 41 ರೈಲುಗಳ ಸಂಚಾರ ವಿಳಂಬವಾಗಿದೆ.
ಕೇವಲ ದೆಹಲಿ ಮಾತ್ರವಲ್ಲದೆ ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ಸೇರಿದಂತೆ ಹಿಮಾಚಲ ಪ್ರದೇಶದಿಂದ ಹರ್ಯಾಣದವರೆಗೂ ಇದೇ ಪರಿಸ್ಥಿತಿ ಮುಂದುವರೆದಿದ್ದು, ತೀವ್ರ ಚಳಿಗೆ ಉತ್ತರ ಭಾರತ ತತ್ತರಿಸಿಹೋಗಿದೆ. ಇನ್ನು ದೆಹಲಿಯಲ್ಲಿ ತೀವ್ರ ಚಳಿಗೆ ಇಬ್ಬರು ಬಲಿಯಾಗಿದ್ದು, ಫತೇಪುರಿ ಬಳಿ ಹೆಸರು ತಿಳಿಯದ ಸುಮಾರು 30 ವರ್ಷದ ವ್ಯಕ್ತಿ ಮತ್ತು ಲಾಹೋರಿಗೇಟ್ ಬಳಿ ಸುಮಾರು 85 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.