ಪ್ಯಾರಿಸ್: ಬುಧವಾರ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನೋರ್ವ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
18 ವರ್ಷದ 'ಹಮೀದ್ ಮೊರಾದ್' ಎಂಬ ಯುವಕ ತಾನಾಗಿಯೇ ಪ್ಯಾರಿಸ್ ಪೊಲೀಸರಿಗೆ ಶರಣಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 'ಚಾರ್ಲಿ ಹೆಬ್ಡೋ' ಪತ್ರಿಕೆ ಮೇಲೆ ನಡೆದ ದಾಳಿ ಸಂಬಂಧ ಪ್ಯಾರಿಸ್ ಪೊಲೀಸರು ಮೂವರ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು. ಈ ಪೈಕಿ 'ಹಮೀದ್ ಮೋರಾದ್' ಪೊಲೀಸರಿಗೆ ಶರಣಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಶಂಕಿತ ಉಗ್ರರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಈಗಾಗಲೇ ಪ್ಯಾರಿಸ್ ಪೊಲೀಸರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಿದ್ದು, 'ಸೈಯದ್ ಕವಾಚಿ' (34 ವರ್ಷ) ಮತ್ತು 'ಚೆರಿಫ್ ಕವಾಚಿ' (32 ವರ್ಷ) ಎಂಬ ಈ ಇಬ್ಬರು ಶಂಕಿತ ಉಗ್ರರು ಸಹೋದರರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಪ್ರಸ್ತುತ ಪರಾರಿಯಾಗಿರುವ ಶಂಕಿತ ಉಗ್ರರ ಬಳಿ ಶಸ್ತ್ರಾಸ್ತ್ರಗಳಿದ್ದು, ಈಗಲೂ ಅವರು ಅಪಾಯಕಾರಿಯಾಗಿದ್ದಾರೆ. ಆದ್ದರಿಂದ ಈ ಇಬ್ಬರು ಉಗ್ರರ ಕುರಿತ ಮಾಹಿತಿಗಳಿದ್ದರೆ ನೀಡುವಂತೆ ಪ್ಯಾರಿಸ್ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪರಾರಿಯಾಗಿರುವ ಉಗ್ರರ ಬಂಧನಕ್ಕಾಗಿ ಬಲೆ ಬೀಸಿರುವ ಪ್ಯಾರಿಸ್ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇನ್ನು ಪ್ಯಾರಿಸ್‌ನಲ್ಲಿ 'ರೆಡ್ ಅಲರ್ಟ್' ಘೋಷಣೆ ಮಾಡಲಾಗಿದ್ದು, ನಗರದಾದ್ಯಂತ ನಾಕಾಬಂದಿ ಹಾಕಿ ತೀವ್ರ ಶೋಧ ನಡೆಸಲಾಗುತ್ತಿದೆ.
ಇಸಿಸ್ ಮುಖ್ಯಸ್ಥನ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರವನ್ನು ವಿರೋಧಿಸಿ ನಿನ್ನೆ ಬೆಳಗ್ಗೆ ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಮೇಲೆ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಪತ್ರಿಕೆಯ ಮುಖ್ಯ ಸಂಪಾದಕ, 4 ಪ್ರಮುಖ ಕಾರ್ಟೂನಿಸ್ಟ್‌ಗಳು, ಕಚೇರಿಯ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಘಟನೆಯನ್ನು ಫ್ರಾನ್ಸ್ ದೇಶದ ಅಧ್ಯಕ್ಷ ಫ್ರಾನ್ ಸ್ವಾ ಓಲಾಂಡ್ ಸೇರಿದಂತೆ ವಿಶ್ವದ ವಿವಿಧ ಗಣ್ಯರು ಖಂಡಿಸಿದ್ದರು.
7 ಮಂದಿಯ ವಿಚಾರಣೆ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ಯಾರಿಸ್ ಪೊಲೀಸರು 7 ಮಂದಿಯನ್ನು ವಿಚಾರಣೆಗೊಳಪಡಿಸಿದ್ದು, ಭಯೋತ್ಪಾದಕ ಸಹೋದರರೊಂದಿಗೆ ಪರೋಕ್ಷ ಸಂಪರ್ಕ ಹೊಂದಿರುವವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸ್ವತಃ ಪ್ರಧಾನಿ ಮ್ಯಾನ್ಯುಯೆಲ್ ವಾಲ್ಸ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲ ಈ ಏಳು ಮಂದಿಯನ್ನು ವಿಚಾರಣೆಗೊಳಪಡಿಸಲಾಯಿತು ಎಂದು ಅವರು ಹೇಳಲಿಲ್ಲ.