ಇಸ್ಲಾಮಾಬಾದ್: ಭಾರತ, ಅಮೆರಿಕ ಮತ್ತು ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡುವ ಬೆದರಿಕೆಯೊಡ್ಡುತ್ತಿರುವ ಉಗ್ರರ ಗುಂಪುಗಳನ್ನು ಪಾಕಿಸ್ತಾನ ದಮನ ಮಾಡಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ತಾಕೀತು ಮಾಡಿದ್ದಾರೆ.
ಪಾಕಿಸ್ತಾನದ ಮಿಲಿಟರಿ ಶಾಲೆಯ ಮೇಲೆ ಡಿಸೆಂಬರ್ 16ರಂದು ನಡೆದ ಉಗ್ರರ ದಾಳಿಯ ಸಂತ್ರಸ್ತರಿಗೆ ಅನುಕಂಪ ವ್ಯಕ್ತಪಡಿಸಿದ ಅವರು, ಮೂರು ರಾಷ್ಟ್ರಗಳ ಹಿತಾಸಕ್ತಿಗಳಿಗೆ ಬೆದರಿಕೆಯೊಡ್ಡುತ್ತಿರುವ ಉಗ್ರರ ಗುಂಪುಗಳ ವಿರುದ್ಧ ಪಾಕಿಸ್ತಾನ ಸಮರ ಹೂಡಲೇಬೇಕು ಎಂದರು.
ಪಾಕಿಸ್ತಾನ ಕೆಲವು ಉಗ್ರರ ವಿರುದ್ಧ ಮಾತ್ರ ಸೆಣಸುತ್ತಿದ್ದು, ಇನ್ನು ಕೆಲವು ಉಗ್ರರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಭಾವನೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದಟ್ಟವಾಗಿದೆ. ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಮತ್ತು ಭಾರತ ಮತ್ತು ಅಫ್ಘಾನಿಸ್ತಾನದಂತಹ ನೆರೆಯ ರಾಷ್ಟ್ರಗಳ ವಿರುದ್ಧ ಸೆಣಸಲು ಪಾಕಿಸ್ತಾನ ಉಗ್ರರನ್ನು ಬಳಸಿಕೊಳ್ಳುತ್ತಿದೆ. ಸದ್ಯ ಪಾಕ್ ಪ್ರವಾಸದಲ್ಲಿರುವ ಜಾನ್ ಕೆರ್ರಿ, ಎಲ್ಲ ಉಗ್ರ ಗುಂಪುಗಳನ್ನು ಸಮಾನವಾಗಿ ಮಟ್ಟಹಾಕಬೇಕು ಎಂದು ಆಗ್ರಹಿಸಿದರು.
''ಪಾಕಿಸ್ತಾನಿ ಮತ್ತು ಅಫ್ಘಾನ್ ತಾಲಿಬಾನ್, ಹಕ್ಕಾನಿ ನೆಟ್‌ವರ್ಕ್, ಲಷ್ಕರೆ ತಯ್ಬಾ ಮತ್ತು ಇತರ ಗುಂಪುಗಳು ನೆರೆಯ ದೇಶಗಳ ಜತೆಗೆ ಪಾಕಿಸ್ತಾನ ಮತ್ತು ಅಮೆರಿಕಕ್ಕೂ ಬೆದರಿಕೆಯೊಡ್ಡುತ್ತಿವೆ. ಈ ಎಲ್ಲ ಗುಂಪುಗಳನ್ನು ಸಮಾನವಾಗಿ ಮಟ್ಟಹಾಕಬೇಕಾದ್ದು ನಮ್ಮೆಲ್ಲರ ಕರ್ತವ್ಯ'' ಎಂದು ಕೆರ್ರಿ ಹೇಳಿದರು.