ದೇಶ

ಗುಜರಾತ್ ಗಾಳಿಪಟ ಉತ್ಸವದ ವೇಳೆ ಗುಂಪು ಘರ್ಷಣೆ: 3 ಸಾವು

Lakshmi R

ಗುಜರಾತ್: ಗುಜರಾತಿನ ಸುಪ್ರಿಸಿದ್ಧ ಗಾಳಿಪಟ ಉತ್ಸವದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಹತ್ತಕ್ಕೂ ಹಲವು ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಹ್ರಿಚ್ ಜಿಲ್ಲೆಯಲ್ಲಿ ಸಂಭವಿಸಿದೆ. ಪ್ರಸ್ತುತ ಈ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಉತ್ತರಾಯಣ ಪುಣ್ಯಕಾಲ ಆರಂಭದ ಅಂಗವಾಗಿ ಗುಜರಾತಿನೆಲ್ಲೆಡೆ ಗಾಳಿಪಟ ಉತ್ಸವ ಅದ್ದೂರಿಯಾಗಿ ಆಚರಣೆ ಸಾಗಿತು. ಬಹ್ರಿಚ್ ಜಿಲ್ಲೆಯ ಹನ್ಸೋಟ್ ಪ್ರದೇಶದಲ್ಲ್ಲಿ ಗಾಳಿಪಟ ಉತ್ಸವದ ವೇಳೆ, ಎತ್ತರಕ್ಕೆ ಗಾಳಿಪಟ ಹಾರಾಟ ಮಾಡುವ ಸಂಬಂಧ ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ಮುಂದುವರೆಯಿತು.

ಇಬ್ಬರು ಪ್ರತ್ಯೇಕ ಗುಂಪುಗಳಿಗೆ ಸೇರಿದ್ದವರಾಗಿದ್ದರಿಂದ, ಗಲಾಟೆ ಸುದ್ದಿ ಕಾಡ್ಗಿಚ್ಚಿನಂತೆ ಹರಡತೊಡಗಿತು. ಸ್ಥಳಕ್ಕೆ ಎರಡು ಗುಂಪಿನ ನೂರಾರು ಮಂದಿ ಜಮಾಯಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದನು.

ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಘರ್ಷಣೆ ಸುದ್ದಿ ತಿಳಿದು ಸ್ಥಳಕ್ಕೆ ಮೀಸಲು ಪಡೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಘರ್ಷಣ ನಿರತ ಗುಂಪನ್ನು ಚದುರಿಸಲು ಅಶ್ರುವಾಯುವನ್ನು ಪ್ರಯೋಗಿಸಿದರು.

ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದ್ದು, ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

SCROLL FOR NEXT