ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಗುರುವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಷ್ಟ್ರ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಸೇರ್ಪಡೆ ಬಳಿಕ ಮಾತನಾಡಿದ ಕಿರಣ್ ಬೇಡಿ ಅವರು, ಪ್ರಧಾನಿ ನರೇಂದ್ರ ಮೋದಿಗೆ ನಾನು ಆಭಾರಿಯಾಗಿದ್ದೇನೆ. ದೇಶವನ್ನೇ ಬದಲಿಸುವ ಸಾಮರ್ಥ್ಯ ಮೋದಿ ಅವರಿಗೆ ಇದೆ. ಮೋದಿ ನಾಯಕತ್ವದಿಂದ ಪ್ರೇರಿತಳಾಗಿ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದರು. 40 ವರ್ಷದ ಅನುಭವವನ್ನು ದೇಶದ ಅಭಿವೃದ್ಧಿಗೆ ಬಳಸುವೆ. ದೆಹಲಿಯಲ್ಲಿ ಏಕ ಪಕ್ಷ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದರು.
ಸೇರ್ಪಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಿರಣ್ ಬೇಡಿ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲಬಂದಿದೆ. ಬೇಡಿಯಂಥ ವಿಶ್ವಾಸಾರ್ಹ ಮಹಿಳೆ ಅಗತ್ಯ ಪಕ್ಷಕ್ಕಿತ್ತು. ಕಿರಣ್ ಬೇಡಿ ಅವರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದರು.