ಕೊಲ್ಕತ್ತಾ: ಕಾರ್ಯನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್‌ಗೆ, ಟಿಎಂಸಿ ಸಂಸದ ಕಪಾಳ ಮೋಕ್ಷ ಮಾಡಿದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಈ ವಿಚಾರ ಸಂಬಂಧ ಕೊಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟಿಎಂಸಿ ಸಂಸದ ಪ್ರಸೂನ್ ಬ್ಯಾನರ್ಜಿ ತಮ್ಮ ಕಾರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಲೇಕ್ ಟೌನ್ ಪ್ರದೇಶದ ಮಾರ್ಗ ಮಧ್ಯೆ ಟ್ರಾಫಿಕ್ ಸಿಗ್ನಲ್‌ನಲ್ಲಿ, ರೆಡ್ ಲೈಟ್ ಬಿದ್ದಿತು.
ಈ ವೇಳೆ ಸಿಗ್ನಲ್‌ನಿಂದ ತನ್ನ ಕಾರನ್ನು ಬಿಡುವಂತೆ, ಟ್ರಾಫಿಕ್ ಪೊಲೀಸ್‌ಗೆ ಧಮ್ಕಿ ಹಾಕಿದನು. ಇದಕ್ಕೆ ಅಂಜದ ಟ್ರಾಫಿಕ್ ಪೊಲೀಸ್, ಸಂಸದನ ಮಾತಿಗೆ ಹೆದರದೆ, ತನ್ನ ಕರ್ತವ್ಯ ಪಾಲನೆ ಮಾಡುತ್ತಿದ್ದನು. ಇದರಿಂದ ಕೆರಳಿದ ಸಂಸದ ಪ್ರಸೂನ್ ಬ್ಯಾನರ್ಜಿ, ತನ್ನ ಕಾರಿನಿಂದ ಕೆಳಗಿಳಿದು ಟ್ರಾಫಿಕ್ ಪೊಲೀಸ್‌ಗೆ ಕಪಾಳ ಮೋಕ್ಷ ಮಾಡಿದನು.
ಸಂಸದನ ಈ ದುರ್ವತನೆಯ ವಿರುದ್ದ ಲೇಕ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಾಜಿ ಭಾರತೀಯ ಫುಟ್‌ಬಾಲ್ ಕ್ಯಾಪ್ಟನ್ ಹಾಗೂ ಹೌರಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ನ ಸಂಸದನಾಗಿರುವ ಬ್ಯಾನರ್ಜಿ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬ್ಯಾನರ್ಜಿ, ತಾನು ಇಂತಹ ವರ್ತನೆ ಎಸಗಿಲ್ಲ.
ನಾನು ಆತನಲ್ಲಿ ಮನವಿ ಮಾಡಿಕೊಂಡೆನು. ನನಗೆ ಮುಖ್ಯವಾದ ಸಭೆಯಲ್ಲಿ ಭಾಗವಹಿಸಬೇಕಾಗಿದ್ದು, ತುರ್ತಾಗಿ ಹೊರಡಬೇಕಿದೆ. ಆದ್ದರಿಂದ ನನ್ನನ್ನು ಸಿಗ್ನಲ್‌ನಿಂದ ಬಿಡುವಂತೆ ಕೇಳಿಕೊಂಡೆ, ಆದರೆ ಟ್ರಾಫಿಕ್ ಕಾನ್ಸ್‌ಸ್ಟೆಬಲ್, ನನ್ನ ವಿರುದ್ಧ ಗಡುಸು ಧ್ವನಿಯಲ್ಲಿ, ನಿಮಗೆ ಯಾವುದೇ ತುರ್ತು ಕೆಲಸವಿದ್ದರೂ ಸರಿ, ನಾನು ನಿಮ್ಮನ್ನು ಸಿಗ್ನಲ್‌ನಿಂದ ಬಿಡಲು ಸಾಧ್ಯವಿಲ್ಲ ಎಂದು ಕಡಾಖಂಡಿತವಾಗಿ ಹೇಳಿಬಿಟ್ಟನು.
ಆತ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆಯಲ್ಲಿರುವುದಾಗಿ ಕಾರ್ಯನಿರತ ಇತರೆ ಟ್ರಾಫಿಕ್ ಪೊಲೀಸರು ಹೇಳಿರುವುದಾಗಿ ಬ್ಯಾನರ್ಜಿ ಟ್ರಾಫಿಕ್ ಪೊಲೀಸ್ ವಿರುದ್ಧ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪ್ರತಿ ಹೇಳಿಕೆ ನೀಡಿರುವ ಟ್ರಾಫಿಕ್ ಪೊಲೀಸ್, ಸಿಗ್ನಲ್‌ನಲ್ಲಿ ಬ್ಯಾನರ್ಜಿ ಅವರ ಕಾರು ಚಾಲಕ, ನಿಯಮ ಬಾಹಿರವಾಗಿ ಮಾರ್ಗ ಬದಲಾಯಿಸಲು ಮುಂದಾದ, ಆತನನ್ನು ನಾನು ತಡೆದು ನಿಲ್ಲಿಸಿದೆ, ಈ ವೇಳೆ ಕಾರಿನಲ್ಲಿ ಕುಳಿತಿದ್ದ ಬ್ಯಾನರ್ಜಿ, ಕಾರಿನಿಂದ ಕೆಳಗಿಳಿದು ಏಕಾಏಕಿ ತನಗೆ ಕಪಾಳ ಮೋಕ್ಷ ಮಾಡಿದರು ಎಂದು ವಿವರಿಸಿದನು.