ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಗಣರಾಜ್ಯೋತ್ಸವ ಪರೇಡ್‌ಗೆ ಆಹ್ವಾನ ನೀಡದಿರುವ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವ ಪರೇಡ್‌ಗೆ ನನಗೆ ಆಹ್ವಾನ ನೀಡಿಲ್ಲ. ನನಗೆ ಯಾಕೆ ಆಹ್ವಾನ ನೀಡಿಲ್ಲ ಅಂತ ಗೊತ್ತಿಲ್ಲ. ಆದರೂ ನಾನು ಆ ಸಮಾರಂಭದಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ದೆಹಲಿ ಮಾಜಿ ಮುಖ್ಯಮಂತ್ರಿಗೆ ಆಹ್ವಾನ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಶಿಷ್ಟಾಚಾರದ ಪ್ರಕಾರ ಗಣರಾಜ್ಯೋತ್ಸವ ಪರೇಡ್‌ಗೆ ಯಾವುದೇ ಮಾಜಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ. ಒಂದು ವೇಳೆ ಅವರು ಬಯಸಿದರೆ ವಿಶೇಷ ಆಹ್ವಾನ ನೀಡಲಾಗುವುದು ಎಂದು ಹೇಳಿದೆ.
ರಕ್ಷಣಾ ಸಚಿವಾಲಯ ಗಣರಾಜ್ಯೋತ್ಸವ ಆಹ್ವಾನ ಪತ್ರಿಕೆಗಳನ್ನು ವಿತರಿಸಿದ್ದು, ಈ ಬಗ್ಗೆ ನಾನು ವಿವವರಣೆ ಪಡೆದುಕೊಂಡಿದ್ದೇನೆ. ಶಿಷ್ಟಾಚಾರದ ಪ್ರಕಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಹಾಲಿ ಮುಖ್ಯಮಂತ್ರಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಬೇಕು ಎಂದು ಶಿಷ್ಟಾಚಾರದಲ್ಲಿ ಹೇಳಿಲ್ಲ. ಹೀಗಾಗಿ ಕೇಜ್ರಿವಾಲ್ ಅವರಿಗೆ ಆಹ್ವಾನ ನೀಡಿಲ್ಲ. ಆದರೆ ಯಾವುದೇ ಮಾಜಿ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಲು ಬಯಸಿದರೆ ಅವರಿಗೆ ವಿಶೇಷ ಆಹ್ವಾನ ನೀಡಲಾಗುವುದು ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಅವರು ಹೇಳಿದ್ದಾರೆ.