ನವದೆಹಲಿ: ವಿಶ್ವದ ಅತ್ಯಂತ ಸುಧಾರಿತ ಡ್ರೋಣ್ ತಯಾರಿಸುವ ಅವಕಾಶ ಬೆಂಗಳೂರಿಗೆ ಲಭ್ಯವಾಗಲಿದೆಯೇ?
ಎಲ್ಲವೂ ಅಂದುಕೊಂಡಂತೆ ನಡೆದರೆ ಅಮೆರಿಕ ಅಧ್ಯಕ್ಷ ಒಬಾಮ ಹಾಗೂ ನಮ್ಮ ಪ್ರಧಾನಿ ನರೇಂದ್ರಮೋದಿ ಅವರು ಸದ್ಯದಲ್ಲೇ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. 10 ಕಿ.ಮೀ. ವ್ಯಾಪ್ತಿಯ ರೇವನ್ ಮಾನವರಹಿತ ಡ್ರೋಣ್(ಯುಎವಿ) ಈವರೆಗೆ ಅಮೆರಿಕ ದಲ್ಲೇ ತಯಾರಾಗುತ್ತಿತ್ತು. ಆದರೆ ಇನ್ನು ಮುಂದೆ ಅಂದರೆ ವರ್ಷಾಂತ್ಯದಲ್ಲಿ ಇದನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದ್ದು, ಭಾರತ ಮತ್ತು ಅಮೆರಿಕ ಜಂಟಿಯಾಗಿ ರೇವನ್ ಡ್ರೋಣ್ ತಯಾರಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದು ನಿಜವಾದರೆ ಬರೋಬ್ಬರಿ 18 ಸಾವಿರ ಕೋಟಿ ಆರ್ಡರ್ ಭಾರತಕ್ಕೆ ಸಿಗಲಿದೆ.
ಏಕೆಂದರೆ, ಏರೋ ವಿರೋನ್ಮೆಂಟ್ ತಯಾರಿಸುತ್ತಿರುವ ಈ ಡ್ರೋಣ್‍ಗಾಗಿ ಸುಮಾರು 7 ರಾಷ್ಟ್ರಗಳು ಕಾಯುತ್ತಿವೆ. ಇನ್ನು ಮುಂದೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ತಯಾರಿಸಲಿರುವ ಡ್ರೋಣ್‍ನ ಹಾರಾಟ ಸಾಮರ್ಥ್ಯ 4ರಿಂದ 6 ಗಂಟೆಗೆ ವಿಸ್ತರಿಸಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋಣ್ ವೈಶಿಷ್ಟ್ಯವೇನು? ಈ ಬ್ಯಾಟರಿಚಾಲಿತ ಡ್ರೋಣ್ ಎಲ್ಲ ವಾತಾವರಣದಲ್ಲೂ, ಎಂತಹ ಪ್ರದೇಶದಲ್ಲೂ ಸಂಚರಿಸುವಂಥದ್ದು. ಇದು ರಣಾಂಗಣವನ್ನು ಹೆಚ್ಚು ಪಾರದರ್ಶಕವಾಗಿಸಿ, ಶತ್ರುಗಳಿರುವ ಪ್ರದೇಶಗಳ ಮೇಲೆ ಸುಲಭದಲ್ಲಿ ದಾಳಿ ಮಾಡುತ್ತದೆ. ಇದು ದೀರ್ಘ ವ್ಯಾಪ್ತಿಯ ಬೇಹುಗಾರಿಕಾ ಯಂತ್ರವಾಗಿಯೂ, ಏರ್ ಆ್ಯಂಬುಲೆನ್ಸ್ ಆಗಿಯೂ ಕಾರ್ಯನಿರ್ವಹಿಸಬಲ್ಲದು. ಬತ್ತದ ಗದ್ದೆಯಲ್ಲೂ ಇಳಿಯುವ ಸಾಮರ್ಥ್ಯ ರೇವನ್‍ಗಿದೆ.