ನವದೆಹಲಿ: ಹುಲ್ಲುಹಾಸಿನಿಂದ ಸುತ್ತುವರೆದ ಹೈದರಾಬಾದ್ ಹೌಸ್ ಮಂಟಪದಲ್ಲಿ ನರೇಂದ್ರ ಮೋದಿ ಮುಕ್ತವಾಗಿ ಆಹ್ಲಾದಕರವಾಗಿ ಚೆಲ್ಲುತ್ತಿದ್ದ ನಗು ಮೊದಲ
ಸುತ್ತಿನ ವಿಜಯದಂತಿತ್ತು.
ದಿನವಿಡೀ ಮೋದಿ ಆ ನಗೆಯಿಂದಲೇ ಮೋಡಿ ಮಾಡಿದ್ದರು. ಸಮಬಲರೊಂದಿಗೆ ಗೆಲ್ಲೋದು ಸಹಜ. ಮೋದಿ ತಮಗಿಂತ ಹೆಚ್ಚು ಬಲಶಾಲಿಯನ್ನು ಗೆದ್ದರು. ವಿಮಾನ ನಿಲ್ದಾಣಕ್ಕೆ ಖುದ್ದು ಮೋದಿಯೇ ಹೋಗಿ ಅಮೆರಿಕ ಅಧ್ಯಕ್ಷರನ್ನು ಬರಮಾಡಿಕೊಂಡು ಅಚ್ಚರಿ ನೀಡಿದರು. ವರ್ಷಗಳಿಂದ ಒಡನಾಡಿದ ಚಿಕ್ಕ ಸಹೋದರನೊಂದಿಗೆ ಬೆರೆಯುವ ದೊಡ್ಡಣ್ಣನಂತೆ ಸ್ವಾಗತಿಸಿ, ಆಲಂಗಿಸಿ ಮತ್ತಷ್ಟು ಅಚ್ಚರಿ ಮೂಡಿಸಿದರು.
ಇಡೀ ವಿಶ್ವವೇ ಗಮನಿಸುತ್ತಿರುವ ಎರಡು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರ ಸಮ್ಮಿಲನವಿದು. ಶಿಷ್ಟಾಚಾರಗಳ ಹೊರೆಯಿಂದ ನಲುಗಿ ಹೋಗಬಹುದಾಗಿದ್ದ ಮಹಾಘಟನೆ- ಮೋದಿ ಅವರ ಶಿಷ್ಟಾಚಾರ ಮೀರಿದ ಆತ್ಮೀಯತೆ, ಪ್ರೀತಿಯಿಂದ ಮನಮೋಹಕ ಘಳಿಗೆಗಳಾಗಿ ಪರಿವರ್ತನೆ ಆಯ್ತು.
ಮೋದಿ ಇಡೀ ದಿನ ಲವಲವಿಕೆಯಿಂದ, ಆತ್ಮವಿಶ್ವಾಸದ ಚಿಲುಮೆಯಂತಿದ್ದರು. ಮೋದಿ ಮುಂದೆ ಬರಾಕ್ ಒಬಾಮ ಕಳಾಹೀನರಾಗಿದ್ದರು. ಅದಕ್ಕೆ ಮುಖ್ಯ ಕಾರಣ ಮೋದಿಯವರಿಗೆ ಸ್ವಂತ ನೆಲದ ಪಿಚ್ಚಿನಲ್ಲಿ ಆಡುವ ಅನುಕೂಲವೂ ಇತ್ತು.
ನೆರೆಯವರ ವಿರುದ್ಧ ಗೆಲವು
ಮೋದಿ ಮೊದಲ ದಿನದ ಗೆಲವು- ಒಬಾಮ ಮೇಲಲ್ಲ. ನಮ್ಮ ನೆರೆ -ಹೊರೆಯವರ ವಿರುದ್ಧ. ಅಂದರೆ ಪಾಕ್ ಮತ್ತು ಚೀನಾ ವಿರುದ್ಧ, ಸದಾ ಕಾಲ್ಕೆರೆದು ಜಗಳಕ್ಕೆ ಬರುವ ಪಾಕ್ ಮತ್ತು ಪಾಕ್‍ಗೆ ನೆರವು ನೀಡುತ್ತಲೇ ಸ್ನೇಹಹಸ್ತ ಚಾಚುವ ಚೀನಾ, ವಿಶ್ವದ ದೊಡ್ಡಣ್ಣನ ಜತೆ ಭಾರತ ಆತ್ಮೀಯತೆ ಗಳಿಸಿಕೊಳ್ಳುವುದನ್ನು ಅರಗಿಸಿ ಕೊಳ್ಳಲಾರವು. ಅಮೆರಿಕ ಕೂಡ ಭಾರತದ ಆತ್ಮೀಯತೆಯನ್ನು ಲಘುವಾಗಿ ಪರಿಗಣಿಸಲಾಗದು.
ನೂರು ಬಿಲಿಯನ್ ಡಾಲರ್ ವಾಣಿಜ್ಯ ವಹಿವಾಟು ಅಮೆರಿಕದ ಪಾಲಿಗೆ ದೊಡ್ಡ ಮೊತ್ತವೇ. ದೀರ್ಘಕಾಲದಲ್ಲಿ ಮೇಕ್ ಇನ್ ಇಂಡಿಯಾ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ ಇದು ಪ್ರಥಮ ಹೆಜ್ಜೆ.