ಸಿಲಿಗುರಿ: ಭೀಕರ ಮಳೆಯಿಂದಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು ಸಾವಿನ ಸಂಖ್ಯೆ 38ಕ್ಕೇ ಏರಿಕೆಯಾಗಿದೆ.
ಕರ್ಸಿಯಾಂಗ್ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ 23 ಮಂದಿ ಸಾವನ್ನಪ್ಪಿದ್ದು, ಮಿರಿಕ್ ಪ್ರದೇಶದಲ್ಲಿ 15 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಮಹೇಂದ್ರ ಗೌನ್ ಎಂಬ ಪ್ರದೇಶದಲ್ಲಿ ಮೂವರು, ಮಿರಿಕ್ ನಲ್ಲಿ ಇಬ್ಬರು ಹಾಗೂ ಲಿಂಬು ಗೌನ್ ನಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಕೂಡ ಸಾವನ್ನಪ್ಪಿದ್ದಾರೆ. ಉಳಿದಂತೆ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ.
ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಿಗೆ (ಎನ್ಎಚ್10 ಹಾಗೂ ಎನ್‌ಎಚ್55) ತೀವ್ರ ಹಾನಿಯಾಗಿದ್ದು, ಡಾರ್ಜಿಲಿಂಗ್ ಹಾಗೂ ಸಿಕ್ಕಿಂ ನಡುವಣ ರಸ್ತೆ ಸಂಪರ್ಕ ಹಾಗೂ ಸಂವಹನ ಸಂಪರ್ಕ ಕಡಿದು ಹೋಗಿದೆ. ಅಲ್ಲದೇ, ಡಾರ್ಜಿಲಿಂಗ್, ಕಲಿಂಪಾಂಗ್ ಹಾಗೂ ಕುರ್ಸೆಆಂಗ್ ಉಪವಿಭಾಗಗಳಲ್ಲಿ 25 ಭೂಕುಸಿತ ಘಟನೆಗಳು ವರದಿಯಾಗಿದ್ದು, ಕಲಿಂಪಾಂಗ್‌ನಲ್ಲಿ 8ನೇ ಹಾಗೂ 11ನೇ ಮೈಲಿ ಪ್ರದೇಶಗಳಲ್ಲಿ 15 ಜನರು ಕಾಣೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.