ನವದೆಹಲಿ: ಲಂಡನ್‍ನಲ್ಲಿ ಕೂತು ದಿನಕ್ಕೊಬ್ಬರನ್ನು ವಿವಾದಕ್ಕೆ ಎಳೆತರುತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರ ಈ ಬಾರಿಯ ಗುರಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಬಿಜೆಪಿ ಸಂಸದ ವರುಣ್ ಗಾಂಧಿ!
ವರುಣ್ ಗಾಂಧಿ ಲಂಡನ್‍ನಲ್ಲಿ ಭೇಟಿಯಾಗಿದ್ದರು. ರು.38 ಕೋಟಿ ಕೊಟ್ಟರೆ ಸೋನಿಯಾ ಜತೆ ಮಾತನಾಡಿ ಆರೋಪ ಮುಕ್ತಗೊಳಿಸುವ ಭರವಸೆ ನೀಡಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮತ್ತೊಂದು ಸುತ್ತಿನ ಆರೋಪ- ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಆದರೆ, ಲಲಿತ್ ಮೋದಿ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಸ್ವತಃ ವರುಣ್ ಗಾಂಧಿ ಅವರು ಲಲಿತ್ ಮೋದಿಯನ್ನು ಭೇಟಿಯಾದದ್ದು ನಿಜ ಎಂದಿದ್ದರೂ, ಯಾವುದೇ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಮಾತನಾಡಿಯೇ ಇಲ್ಲ. ಮೋದಿ ಆಧಾರರಹಿತ ಆರೋಪಗಳಿಗೆ ಸ್ಪಷ್ಟನೆ ನೀಡಲ್ಲ ಎಂದಿದ್ದಾರೆ.
ಮೋದಿ ಹೇಳಿದ್ದೇನು?: ಕೆಲ ವರ್ಷಗಳ ಹಿಂದೆ ವರುಣ್ ಗಾಂಧಿ ನನ್ನ ಮನೆಗೆ ಆಗಮಿಸಿದ್ದರು. ಸೋನಿಯಾ ಜತೆ ಮಾತನಾಡಿ ಎಲ್ಲ ವಿವಾದ ಇತ್ಯರ್ಥಪಡಿಸುವ ಭರವಸೆ ನೀಡಿದ್ದರು. ಇದಕ್ಕಾಗಿ
ಇಟಲಿಯಲ್ಲಿರುವ ಸೋನಿಯಾ ಸಹೋದರಿಯನ್ನು ಭೇಟಿಯಾಗುವಂತೆಯೂ ವರುಣ್ ಸೂಚಿಸಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಆದರೆ, ಮೋದಿ ಆಧಾರರಹಿತ ಆರೋಪ
ಮಾಡುತ್ತಿದ್ದಾರೆ ಎಂದು ವರುಣ್ ಸ್ಪಷ್ಟನೆ ನೀಡಿದಾಗ, ನೀವು ಸೋನಿಯಾ ಗಾಂಧಿ ಬಗ್ಗೆ ಹೇಳಿದ್ದೇನು ಎನ್ನುವುದಕ್ಕೆ ಅಲ್ಲೇ ಇದ್ದ ವಿಶ್ವದ ಖ್ಯಾತ ಜ್ಯೋತಿಷಿ ಸಾಕ್ಷಿಯಾಗಿದ್ದಾರೆ. ಕೆಲ ವರ್ಷದ ಹಿಂದೆ ರಿಟ್ಜ್ ಹೋಟೆಲ್‍ನಲ್ಲಿ ಉಳಿದಿದ್ದಾಗ ನೀವು ಲಂಡನ್‍ನ ನನ್ನ ಮನೆಗೆ ಭೇಟಿಯೇ ನೀಡಲಿಲ್ಲವೇ ಎಂದು ವರುಣ್ ರನ್ನು ಪ್ರಶ್ನಿಸಿದ್ದಾರೆ
ಲಲಿತ್ ಮೋದಿ ಆರೋಪಕ್ಕೆ ಸಂಬಂಧಿಸಿ ಬಿಜೆಪಿಯು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ವರುಣ್ ಗಾಂಧಿ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ವಿಚಾರಕ್ಕೆ ಸಂಬಂಧಿಸಿ ಉತ್ತರಿಸಬೇಕಿದೆ. ಕಾಂಗ್ರೆಸ್‍ನವರು ಮಿತಿ ಮೀರಿ ಪ್ರಶ್ನೆ ಕೇಳುತ್ತಾರೆ. ಈಗ ಅವರಿಗೆ ಪ್ರತಿಕ್ರಿಯೆ ನೀಡುವ ಕಾಲ ಬಂದಿದೆ ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಹೇಳಿದ್ದಾರೆ.
ಲಲಿತ್ ಮೋದಿ ಆರೋಪಗಳೆಲ್ಲ ಶುದ್ಧ ಸುಳ್ಳು ಎಂದು ವರುಣ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಲಲಿತ್ ಮೋದಿ ಅವರನ್ನು ಲಂಡನ್‍ನಲ್ಲಿ ಭೇಟಿಯಾಗಿದ್ದು ನಿಜ. ಆದರೆ, ಸೋನಿಯಾ ಗಾಂಧಿ ಜತೆಗೆ ಮಾತುಕತೆ ನಡೆಸಿ ಐಪಿಎಲ್ ಮಾಜಿ ಮುಖ್ಯಸ್ಥನನ್ನು ಆರೋಪ ಮುಕ್ತಗೊಳಿಸುವ ಆರೋಪವನ್ನು ನಿರಾಕರಿಸಿದ್ದಾರೆ. ಜತೆಗೆ, ಈ ರೀತಿಯ ಆಧಾರ ರಹಿತ ಆರೋಪಗಳಿಗೆ ಉತ್ತರ ನೀಡುವುದು ನನ್ನ ಘನತೆಗೆ ತಕ್ಕುದಾದುದಲ್ಲ ಎಂದೂ ವರುಣ್ ಹೇಳಿದ್ದಾರೆ.
ಲಲಿತ್ ಮೋದಿ ವಿರುದ್ಧದ ಎಫ್ಐಆರ್‍ಗೆ ವಿವಿಧ ಫೆಮಾ ಉಲ್ಲಂಘನೆ ಪ್ರಕರಣಗಳನ್ನೂ ಜಾರಿ ನಿರ್ದೇಶನಾಲಯ(ಇಡಿ) ಸೇರ್ಪಡೆ ಮಾಡಿದೆ. ಲಲಿತ್ ಮೋದಿ ಪ್ರಕರಣದಲ್ಲಿ ಮೇಲ್ನೋಟಕ್ಕೆ ಫೆಮಾ ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ ಇಡಿ ಈ ಕ್ರಮ ಕೈಗೊಂಡಿದೆ. ಫೆಮಾ ಉಲ್ಲಂಘನೆಗೆ ಸಂಬಂಧಿಸಿದ ಸಿವಿಲ್ ಪ್ರಕರಣಗಳಲ್ಲಿ ವಿದೇಶಗಳು ಹೆಚ್ಚಿನ ನೆರವು ನೀಡುವುದಿಲ್ಲ. ಈಗಾಗಲೇ ಮೋದಿ ವಿರುದ್ಧ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.