ಅರಿನ(ಜಮ್ಮು-ಕಾಶ್ಮೀರ್): ಭಾರತ-ಪಾಕ್ ಗಡಿ ಭಾಗದಲ್ಲಿ ಮತ್ತೆ ಬಂದೂಕು ಅಬ್ಬರಿಸಿದೆ. ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಅರ್ನಿಯಾ ವಲಯದಲ್ಲಿ ಪಾಕಿಸ್ತಾನ ಸೇನಾಪಡೆಗಳು ಯುದ್ಧ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾಪಡೆಗಳ ಮೇಲೆ ದಾಳಿ ನಡೆಸಿದವು. ಇದಕ್ಕೆ ಪ್ರತಿದಾಳಿ ನಡೆಸಿದ ಭಾರತೀಯ ಯೋಧರು ಶತ್ರುಗಳನ್ನು ಸದೆಬಡಿದಿದ್ದಾರೆ. ದಾಳಿಯಲ್ಲಿ ಭಾರತೀಯ ಜವಾನರೊಬ್ಬರು ಸಾವನ್ನಪ್ಪಿದ್ದು, ಸದ್ಯ ಯುದ್ಧ ನಿಂತಿದೆ.
ಘಟನೆಯಿಂದ ತೀವ್ರ ಭೀತಿಗೊಳಗಾಗಿರುವ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಮನೆ ಬಿಟ್ಟು ತೊರೆಯುತ್ತಿದ್ದಾರೆ.
ಯುದ್ಧ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೈನಿಕರು, ಕಳೆದ ರಾತ್ರಿಯಿಡೀ ಜಮ್ಮುವಿನ ಗಡಿಯಲ್ಲಿರುವ ಆರು ಚೆಕ್ ಪೋಸ್ಟ್ ಬಳಿ ಸತತ ದಾಳಿ ನಡೆಸಿದ್ದಾರೆ. ಇದಕ್ಕೆ ಭಾರತದ ಗಡಿ ಭದ್ರತಾ ಯೋಧರು ತಕ್ಕ ಉತ್ತರ ನೀಡಬೇಕಾಗಿ ಬಂತು. ರಾತ್ರಿಯಿಡೀ ನಡೆದ ಕದನ ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ನಿಂತಿದೆ.
ಗಡಿಯಲ್ಲಿನ ಯುದ್ಧ ಅಲ್ಲಿನ ನಿವಾಸಿಗಳ ನೆಮ್ಮದಿಯನ್ನು ಹಾಳು ಮಾಡಿದೆ. ಕಳೆದ ವರ್ಷ ಕೂಡ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿತ್ತು.