ದೇಶ

ಕುಟುಂಬ ಯೋಜನೆ ಅಗತ್ಯವನ್ನು ಮುಸ್ಲೀಮರು ಅರಿಯಬೇಕು: ಶಿವಸೇನೆ

Sumana Upadhyaya

ಮುಂಬೈ: ನಮ್ಮ ದೇಶದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಭಾಷೆ ಮತ್ತು ಭೌಗೋಳಿಕ ಅಸಮತೋಲನ ಉಂಟಾಗುತ್ತದೆ. ಇದನ್ನು ಬಗೆಹರಿಸಲು ಮುಸಲ್ಮಾನರು ಕುಟುಂಬ ಯೋಜನೆಯನ್ನು ಪಾಲಿಸಬೇಕಿದೆ ಎಂದು ಶಿವಸೇನೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದೆ.

ಮುಸ್ಲಿಮರಿಗೆ ಸರಿಯಾಗಿ ಹಿಂದೂಗಳ ಸಂಖ್ಯೆ ಹೆಚ್ಚಿಸುವುದು ಇದಕ್ಕೆ ಪರಿಹಾರವಲ್ಲ. ಎಲ್ಲಾ ಧರ್ಮದವರು ಕುಟುಂಬ ಯೋಜನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ  ಕಾನೂನು ತರಲು ಸರ್ಕಾರಕ್ಕೆ ಸಂಘ ಪರಿವಾರ ಒತ್ತಡ ತರಬೇಕು ಎಂದು ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯ ಮುಖವಾಣಿಯಲ್ಲಿ ಹೇಳಿದೆ.

2001ರಿಂದ 2011ರವರೆಗೆ ಮುಸಲ್ಮಾನರ ಸಂಖ್ಯೆ ನಮ್ಮ ದೇಶದಲ್ಲಿ ಶೇಕಡಾ 24ರಷ್ಟು, 2015ರಲ್ಲಿ ಶೇಕಡಾ 5ರಿಂದ 10ರಷ್ಟು ಜಾಸ್ತಿಯಾಗಿದೆ.ಜನಸಂಖ್ಯೆ ಹೆಚ್ಚಳದಿಂದ ಭಾಷೆ,ಭೌಗೋಳಿಕ ಮತ್ತು ಭಾವನಾತ್ಮಕ ಅಸಮತೋಲನ ಉಂಟಾಗಿ ದೇಶದ ಏಕತೆಗೆ ಧಕ್ಕೆಯುಂಟಾಗುತ್ತದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕುಟುಂಬ ಯೋಜನೆಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುಸಲ್ಮಾನರಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದೆ.

ಮುಸಲ್ಮಾನರ ಯಾವುದೇ ಸಮಸ್ಯೆಗಳನ್ನು ಪರಿಗಣಿಸುವುದಾಗಿ ಪ್ರಧಾನಮಂತ್ರಿ ಹೇಳಿದ್ದಾರೆ. ಅದೇ ರೀತಿ ಮುಸಲ್ಮಾನರು ಕೂಡ ದೇಶಕ್ಕೆ ಏನಾದರೂ ಸಹಾಯ ಮಾಡಬೇಕಲ್ಲವೆ? ಎಂದು ಶಿವಸೇನೆ ಕೇಳಿದೆ.

ಲೋಕಪಾಲ್ ಗಿಂತ ಹೆಚ್ಚಾಗಿ ನಮ್ಮ ದೇಶಕ್ಕೆ ಸಾಮಾನ್ಯ ನಾಗರಿಕ ಸಂಹಿತೆ ಬೇಕು ಎಂದು ಅದು ಅಭಿಪ್ರಾಯಪಟ್ಟಿದೆ.

SCROLL FOR NEXT