ಹೈದರಾಬಾದ್: ಆಂಧ್ರಪ್ರದೇಶ ಹಾಗೂ ತೆಲಂಗಾಣ ಬಿಕ್ಕಟ್ಚಿನಿಂದಾಗಿ ಸಾರ್ವಜನಿಕರ ಶಾಂತಿ ಹಾಳಾಗಿದೆ ಹಾಗಾಗಿ ಈ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದು ನಟ ಹಾಗೂ ಜನ ಸೇನೆ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಮಂಗಳವಾರ ಹೇಳಿದ್ದಾರೆ.
ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳನ್ನು ನಿಯಂತ್ರಿಸುವ ಹೊಣೆ ಕೇಂದ್ರದ ಯುಪಿಎ ಮತ್ತು ಎನ್ ಡಿಎ ಸರ್ಕಾರಕ್ಕಿದೆ. ಒಂದು ವೇಳೆ ಕೇಂದ್ರ ಸರ್ಕಾರವು ಈ ವಿಚಾರವನ್ನು ನಿರ್ಲಕ್ಷಿಸಿದ್ದೇ ಆದರೆ, ಮುಂದಿನ ದಿನಗಳಲ್ಲಿ ಇದೊಂದು ನಾಗರೀಕ ಯುದ್ಧವಾಗಿ ಸಾರ್ವಜನಿಕ ಜೀವನದಲ್ಲಿ ಅಶಾಂತಿ ಮೂಡಬಹುದು. ಹಾಗಾಗಿ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿ ಎರಡು ರಾಜ್ಯಗಳ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣಗಳನ್ನು ಎರಡು ರಾಜ್ಯಗಳಾಗಿ ಭಾಗ ಮಾಡಿದಾಗ ಆಂಧ್ರಪ್ರದೇಶಕ್ಕೆ ಬಹುಪಾಲು ಪ್ರದೇಶಗಳು ಆಂಧ್ರಪ್ರದೇಶ ಪಾಲಿಗೆ ಹೋಗಿದೆ. ಹೀಗಾಗಿ ರಾಜ್ಯಗಳ ಭಾಗ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಎರುಡು ರಾಜ್ಯಗಳ ಮಧ್ಯೆ ಇರುವ ಸಮಸ್ಯೆಗಳನ್ನು ಆಯಾ ರಾಜ್ಯ ಮುಖ್ಯಮಂತ್ರಿಗಳು ಕೂತು ಇತ್ಯರ್ಥ ಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯಪಾಲರಿಗೆ ವಿಶೇಷ ಅಧಿಕಾರ ನೀಡುವ ಸೆಕ್ಷನ್ 8 ಜಾರಿ ಪ್ರಸ್ತುತ ಕುರಿತಂತೆ ಮಾತನಾಡಿರುವ ಅವರು, ಪ್ರಸ್ತುತ ಎರಡು ರಾಜ್ಯಗಳಲ್ಲಿ ಸಮಸ್ಯೆಗಳಿದ್ದು, ಸೆಕ್ಷನ್ 8 ಜಾರಿಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ.