ಮುಂಬೈ: 2012ರಿಂದ 2015ರ ಅವಧಿಯಲ್ಲಿ ಸೆನ್ಸಾರ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಎ ಸರ್ಟಿಫಿಕೇಟ್ ಸಿಗಬೇಕಿದ್ದ 172 ಚಿತ್ರಗಳಿಗೆ ಯುಎ ಪ್ರಮಾಣಪತ್ರ ಹಾಗೂ ಯುಎ ಪ್ರಮಾಣಪತ್ರ ಲಭಿಸಬೇಕಿದ್ದ 166 ಚಿತ್ರಗಳಿಗೆ ಯು ಸರ್ಟಿಫಿಕೇಟ್ ನೀಡಿರುವ ಸೆನ್ಸಾರ್ ಮಂಡಳಿಯನ್ನು ಸಿಎಜಿ ತನ್ನ ವರದಿಯಲ್ಲಿ ತೀವ್ರತರಾಟೆಗೆ ತೆಗೆದುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆ ಅರ್ಜಿ ವಿಚಾರಣೆ ಮೂಲಕ ಈ ವಿಷಯ ಬಹಿರಂಗವಾಗಿದೆ. ಸಿಬಿಎಫ್ ಸಿ(ಸೆನ್ಸಾರ್ ಮಂಡಳಿ) ಸಿನಿಮಾಗಳನ್ನು ಪ್ರಮಾಣೀಕರಿಸುವುದರಲ್ಲಿ ಪಕ್ಷಪಾತ ಧೋರಣೆಯನ್ನೂ ಅನುಸರಿಸುತ್ತಿದೆ ಎಂದು ಸಿಎಜಿ ವರದಿಯಲ್ಲಿ ದೋಷಾರೋಪಣೆ ಮಾಡಿದೆ. ವಿಹಾರ್ ದುರ್ವೆ ಎಂಬುವವರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ 70 ಪುಟಗಳ ಉತ್ತರ ನೀಡಿರುವ ಸಿಎಜಿ ಎರಡು ಚಿತ್ರಗಳ ಸರ್ಟಿಫಿಕೇಟ್‍ನಲ್ಲಿ ಪ್ರಮಾಣೀಕರಿಸಿದವರ ಸಹಿಯಲ್ಲಿಯೂ ವ್ಯತ್ಯಯ ಕಂಡುಬಂದಿದೆ ಎಂದು ತಿಳಿಸಿದೆ.