ದುಶನ್ಬೆ: ಕೃಷಿ, ಜಾನುವಾರು ಮತ್ತು ಡೈರಿ ಕ್ಷೇತ್ರಗಳಲ್ಲಿ ಭಾರತ ಮತ್ತು ತಜಕಿಸ್ತಾನ ರಾಷ್ಟ್ರಗಳು ಕೈ ಜೋಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ತಜಕಿಸ್ತಾನ ರಾಜಧಾನಿ ದುಶನ್ಬೆಯಲ್ಲಿ ಕೃಷಿ ವಿಷಯಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಐದು ಮಧ್ಯ ಏಷ್ಯಾ ರಾಷ್ಟ್ರಗಳ ಭೇಟಿಯಲ್ಲಿ ಈ ದಿನ ನನಗೆ ಮುಖ್ಯವಾದ ದಿನ. ಇದುವರೆಗೆ ಬೇರೆ ರಾಷ್ಟ್ರಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ವ್ಯಾಪಾರ, ಹಣಕಾಸು, ಉತ್ಪಾದನೆಗೆ ಸಂಬಂಧಪಟ್ಟ ಸಭೆಗಳಲ್ಲಿ ಭಾಗವಹಿಸುತ್ತಿದ್ದೆ. ಬೇರೆ ದೇಶದಲ್ಲಿ ಕೃಷಿಗೆ ಸಂಬಂಧಪಟ್ಟ ಸಭೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು ಎಂದು ಹರ್ಷ ವ್ಯಕ್ತಪಡಿಸಿದರು.
1947ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಕೃಷಿ ಕ್ಷೇತ್ರದಲ್ಲಿ ನಮ್ಮ ದೇಶದ ಪಯಣ ನಿಜಕ್ಕೂ ಅದ್ಭುತ. ಇಂದು ಆಹಾರ ಧಾನ್ಯ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಸಸ್ಯ ಮತ್ತು ಪ್ರಾಣಿಜನ್ಯ ಆಹಾರ ರಫ್ತಿನಲ್ಲಿ ಭಾರತ ಸಹ ಇಂದು ಪ್ರಮುಖ ರಾಷ್ಟ್ರವಾಗಿದೆ. ಭಾರತ ಮತ್ತು ತಜಕಿಸ್ತಾನದ ಪರಸ್ಪರ ಸಹಕಾರವೂ ಉತ್ತಮವಾಗಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದರು.