ದೇಶ

ಆಮ್ ಆದ್ಮಿ ಪಕ್ಷ ದಿವಾಳಿ; ಮತ್ತೆ ದೇಣಿಗೆ ಸಂಗ್ರಹ: ಅರವಿಂದ್ ಕೇಜ್ರಿವಾಲ್

Srinivas Rao BV

ನವದೆಹಲಿ: ಆಮ್ ಆದ್ಮಿ ಪಕ್ಷ ಬರ್ಬಾದ್ ಆಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಎ.ಎನ್.ಐ ಗೆ ಹೇಳಿಕೆ ನೀಡಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ತಮ್ಮ ಪಕ್ಷಕ್ಕೆ ಹಣದ ಕೊರತೆ ಉಂಟಾಗಿದೆ ಎಂದಿದ್ದಾರೆ.

ನಾವು ಅಧಿಕಾರಕ್ಕೆ ಬಂದ ನಂತರ ನಮ್ಮ ಬಳಿ ಇದ್ದ ಹಣ ಸಂಪೂರ್ಣವಾಗಿ ಖರ್ಚಾಗಿದೆ ಎಂದು ಕೇಜ್ರಿವಾಲ್ ಹೇಳಿರುವುದನ್ನು ಎ.ಎನ್.ಐ ಪ್ರಕಟಿಸಿದೆ. ಹಣದ ಕೊರತೆ ಎದುರಾಗಿರುವುದರಿಂದ ಪಕ್ಷವನ್ನು ನಡೆಸಲು  ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ ಪಕ್ಷ ಮುನ್ನಡೆಸುವುದಕ್ಕಾಗಿ ಸಾರ್ವಜನಿಕರು ನಮಗೆ ದೇಣಿಗೆ ನೀಡಿದ್ದರು, ದೇಣಿಗೆಯನ್ನು ಅಕ್ರಮವಾಗಿ ಸ್ವೀಕರಿಸಿಲ್ಲ ಈ ಹಿಂದೆ ಪಡೆದ ದೇಣಿಗೆಯ ಪ್ರತಿ ರೂಪಾಯಿಗೂ ದಾಖಲೆ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.  ಜನಸಾಮಾನ್ಯರು ನಮಗೆ ನೀಡುವ ಸಹಾಯಕ್ಕೆ ಋಣಿಯಾಗಿದ್ದೇವೆ. ಈಗ ಪಕ್ಷದ ದೈನಂದಿನ ಖರ್ಚಿಗೆ ಮತ್ತೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಅಗತ್ಯ ಎದುರಾಗಿದೆ  ಮುಖ್ಯಮಂತ್ರಿಯಾಗಿದ್ದರೂ ಸಾರ್ವಜನಿಕರಿಂದ ದೇಣಿಗೆ ಪಡೆಯುತ್ತೀರಾ ಎಂದು ಕೇಳಬಹುದು, ಆದರೆ ಅಕ್ರಮವಾಗಿ ದೇಣಿಗೆ ಸ್ವೀಕರಿಸಲು ಸಿದ್ಧವಿಲ್ಲದ ಕಾರಣ ದೇಣಿಗೆ ಸಂಗ್ರಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ ಕೇಜ್ರಿವಾಲ್.

ದೆಹಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಆಮ್ ಆದ್ಮಿ ಪಕ್ಷ ರೇಡಿಯೋ ಜಾಹಿರಾತುಗಳಿಗಾಗಿ 500 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

SCROLL FOR NEXT