ಬೆಂಗಳೂರು: ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರ ಅನುಸರಿಸಿರುವ ಮೀಸಲು ನೀತಿಯ ಕುರಿತಾದ ವಿವರ ಸಲ್ಲಿಸುವಂತೆ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಗ್ರಾ.ಪಂ. ಚುನಾವಣೆಯಲ್ಲಿ ಸರ್ಕಾರ ನಿಗದಿಪಡಿಸಿದ್ದ ಮೀಸಲು ಪಟ್ಟಿಯಲ್ಲಿ ನಿಯಮ ಪಾಲಿಸಿಲ್ಲ ಎಂದು ಆರೋಪಿಸಿ ಈ ಹಿಂದೆ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತ್ತು.
ಏಕಸದಸ್ಯ ಪೀಠದ ಈ ಆದೇಶ ಪ್ರಶ್ನಿಸಿ ಯಶವಂತ ಶೆಟ್ಟಿ ಎಂಬುವರು ಮೇಲ್ಮನವಿ ಅರ್ಜಿ ದಾಖಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಗ್ರಾಂಪ ಅಧ್ಯಕ್ಷ ಸ್ಥಾನವನ್ನು ಕಳೆದ ಐದು ಅವಧಿಯಿಂದಲೂ ಸಾಮಾನ್ಯ ಮಹಿಳೆಗೆ ಮೀಸಲಾಗಿರಿಸಿದೆ. ಹೀಗಾಗಿ ಮೀಸಲಾತಿ ಪಟ್ಟಿಯಲ್ಲಿ ಲೋಪಗಳಿದ್ದು ಸರಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಮೇಲ್ಮನವಿಯಲ್ಲಿ ಕೋರಿದ್ದ ಹಿನ್ನೆಲೆಯಲ್ಲಿ ವಿವರ ಸಲ್ಲಿಕೆಗೆ ಹೈ ಕೋರ್ಟ್ ಸೂಚಿಸಿದೆ.