ಚಿತ್ತೂರು: ದಕ್ಷಿಣ ಭಾರತ ಶ್ರೀಮಂತ ದೇವರು ಸಪ್ತಗಿರಿ ವಾಸ ತಿರುಪತಿ ತಿಮ್ಮಪ್ಪನ ಬೆಟ್ಟದಲ್ಲಿ ಸುರಂಗ ಕೊರೆಯಲು ಆಂಧ್ರ ಪ್ರದೇಶ ಸರ್ಕಾರ ಕೈಗೊಂಡಿರುವ ನಿರ್ಣಯ ಇದೀಗ ವಿವಾದದಕ್ಕೆ ಕಾರಣವಾಗಿದೆ.
ಚಂದ್ರಬಾಬು ನಾಯ್ಡು ಸರ್ಕಾರ ರಾಯಲಸೀಮಾ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಕಲ್ಪಿಸಲು ಗಾಲೇರಿ ನಗರಿ ಸೃಜನ ಶ್ರವಂತಿ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿ ತಿರುಪತಿ ತಿಮ್ಮಪ್ಪನ 7 ಬೆಟ್ಟಗಳ ಪೈಕಿ ಒಂದು ಬೆಟ್ಟದ ಕೆಳಗೆ ಸುರಂಗ ಕೊರೆಯಲು ನಿರ್ಧರಿಸಿದೆ. ಇದಕ್ಕಾಗಿ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದು, ಕೇಂದ್ರ ಸರಕಾರದ ಅನುಮತಿಗಾಗಿ ಕಳುಹಿಸಿದೆ.
ಸಪ್ತಗಿರಿಗಳು ಅಭಯಾರಣ್ಯವಾಗಿರುವುದರಿಂದ ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿದ್ದು, ತಮ್ಮ ಯೋಜನೆಗೆ ಶೀಘ್ರವೇ ಅನುಮತಿ ಸಿಗುವ ವಿಶ್ವಾಸದಲ್ಲಿದೆ. ಆದ್ರೆ, ತಿರುಪತಿಯ ಸಪ್ತಗಿರಿ ತಂಟೆಗೆ ಬಂದ್ರೆ, ಸುಮ್ಮನಿರಲ್ಲವೆಂದು ಆಗಮಶಾಸ್ತ್ರಿಗಳು ಮತ್ತು ಭಕ್ತರು ಎಚ್ಚರಿಸಿದ್ದಾರೆ.
ಕೃಷ್ಣಾ ನದಿಯಿಂದ 38 ಟಿಎಂಸಿ ನೀರನ್ನು ಕಡಪ, ಚಿತ್ತೂರು, ನೆಲ್ಲೂರು ಜಿಲ್ಲೆಗಳ 2.60 ಲಕ್ಷ ಎಕರೆ ನೀರಾವರಿ ಮತ್ತು ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ. ಆದ್ರೆ, ಚಿತ್ತೂರು, ಕಡಪದಲ್ಲಿ ಪಸರಿಸಿರುವ ತಿರುಮಲ ಗಿರಿ ಅಭಯಾರಣ್ಯದಲ್ಲಿ ಸುಮಾರು 16 ಕಿ.ಮೀ ಸುರಂಗ ಕೊರೆಯಲು ಸರ್ಕಾರ ನಿರ್ಧರಿಸಿದೆ. ಅಲ್ದೇ, ಅತ್ಯಾಧುನಿಕ ತಂತ್ರಜ್ಞಾನದಿಂದ ಅರಣ್ಯ ಮತ್ತು ಬೆಟ್ಟಗಳಿಗೆ ಯಾವುದೇ ತೊಂದರೆಯಾಗಲ್ಲ ಎಂಬುದು ಸರ್ಕಾರದ ವಾದ
ತಿರುಪತಿ ದೇವಸ್ಥಾನ ಆಡಳಿತ ಮತ್ತು ಆಗಮಶಾಸ್ತ್ರ ಪಂಡಿತರು ತಕರಾರು ತೆಗೆದಿದ್ದಾರೆ. ಶ್ರೀಮನ್ನಾರಾಯಣ ಅವತರಿಸಿರುವ ಪವಿತ್ರ ಬೆಟ್ಟದಲ್ಲಿ ಇಂಥ ಯೋಜನೆ ಅನಿಷ್ಟವೆಂದು ಎಚ್ಚರಿಸಿದೆ.