ದೇಶ

ಗುಜರಾತ್ ಕೋಮು ಗಲಭೆ ವಿಚಾರಣೆಯಿಂದ ಇಬ್ಬರು ನ್ಯಾಯಾಧೀಶರು ಹೊರಕ್ಕೆ

ಅಹ್ಮದಾಬಾದ್: 2002ರ ಗುಜರಾತ್ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ತಮ್ಮನ್ನು ಒಲಿಸಿಕೊಳ್ಳಲು ಯತ್ನಿ ನಡೆಸುತ್ತಿದ್ದಾರೆಂದು ಆರೋಪಿಸಿರುವ ನ್ಯಾಯಾಧೀಶರು ವಿಚಾರಣೆಯನ್ನೇ ಕೈ ಬಿಟ್ಟಿರುವುದಾಗಿ ಗುರುವಾರ ತಿಳಿದುಬಂದಿದೆ.

ಗುಜರಾತ್ ನ ನರೋಡಾ ಪಾಟಿಯಾದಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಆಹ್ಮದಾಬಾದ್ ನ್ಯಾಯಾಲಯವು ಆಗಸ್ಟ್ 29ರಂದು ಭಜರಂಗದಳದ ಮಾಜಿ ಮುಖ್ಯಸ್ಥ ಬಾಬು ಭಜರಂಗಿ, ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡನಾನಿ ಸೇರಿದಂತೆ 32 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ 29 ಮಂದಿಯನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ಈ ಪ್ರಕರಣ ಸಂಬಂಧ ಕಳೆದವಾರ ನ್ಯಾಯಾಧೀಶರಾದ ಎಂ.ಆರ್.ಶಾ ಮತ್ತು ಕೆ.ಎಸ್. ಜಾವೇರಿ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಅಪರಾಧಿಗಳಿಗೆ ವಿಚಾರಣೆಯಲ್ಲಿ ಮೀಸಲಾತಿ ನೀಡುವಂತೆಯೂ ಹಾಗೆ ಮತ್ತೊಂದು ಪೀಠಕ್ಕೆ ಪ್ರಕರಣವನ್ನು ರವಾನಿಸುವಂತೆ ಆರೋಪಿಗಳ ಪರ ವಕೀಲರು ಆಮಿಷವೊಡ್ಡಿದ್ದರು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರಕರಣ ಸಂಬಂಧ ನ್ಯಾಯಾಧೀಶರಿಗೆ ಆಮಿಷವೊಡ್ಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ತಮ್ಮ ಪರವಾಗಿ ನ್ಯಾಯಮಂಡಿಸುವಂತೆ ನ್ಯಾಯಾಧೀಶೆ ಜ್ಯೋತ್ಸ್ನಾ ಯೋಗ್ನಿಕ್ ಅವರಿಗೆ ಜೀವ ಬೆದರಿಕೆ ನೀಡಲಾಗಿತ್ತು. ಹೀಗಾಗಿ ನ್ಯಾಯಾಧೀಶೆ ಜ್ಯೋತ್ಸ್ನಾ ಅವರಿಗೆ ಸರ್ಕಾರ ಜೆಡ್ ಪ್ಲಸ್ ಭದ್ರತೆ ಒದಗಿಸಿತ್ತು. ಆದರೆ, ಸೆಪ್ಟಂಬರ್ ತಿಂಗಳಲ್ಲಿ ಈ ಭದ್ರತೆಯನ್ನು ಸರ್ಕಾರ ಹಿಂಪಡೆದಿತ್ತು. ಹೀಗಾಗಿ ಪ್ರಕರಣವನ್ನು ವಿಚಾರಣೆ ನಡೆಸುವಂತೆ ನ್ಯಾಯಾಧೀಶೆ ಜ್ಯೋತ್ಸ್ನಾ ವಿಶೇಷ ತನಿಖಾ ತಂಡಕ್ಕೆ ನೋಟಿಸ್ ಜಾರಿ ಮಾಡಿದ್ದರು.

SCROLL FOR NEXT