ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಜು.25 ರಂದು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮೋದಿ ಮೇಲೆ ಮಾನವ ಬಾಂಬ್ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಮಾಹಿತಿ ದೊರೆತಿದ್ದು ಕಟ್ಟೆಚ್ಚರ ವಹಿಸುವಂತೆ ಬಿಹಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬಿಹಾರದ ಮುಜಾಫರ್ ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯನ್ನುದ್ದೇಶೀ ಮಾತನಾಡಲಿದ್ದಾರೆ. ಈ ವೇಳೆ ಆತ್ಮಾಹುತಿ ಬಾಂಬರ್ ಗಳು ಮಾಧ್ಯಮ ಪ್ರತಿನಿಧಿ, ಪೊಲೀಸ್ ಅಧಿಕಾರಿ, ವಿದ್ಯುತ್ತಜ್ಞ, ಆಯೋಜಕರ ಸೋಗಿನಲ್ಲಿ ಬಂದು ದಾಳಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
1991 ರಲ್ಲಿ ರಾಜೀವ್ ಗಾಂಧಿ ಮೇಲೆ ನಡೆದ ದಾಳಿಯ ಮಾದರಿಯಲ್ಲಿ ಈ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಮುಜಾಫರ್ ಪುರಕ್ಕೆ ತೆರಳುವುದಕ್ಕೂ ಮುನ್ನ ಪ್ರಧಾನಿ ಮೋದಿಮ್ ಪಾಟ್ನಾದಲ್ಲಿ ನಿರ್ಮಿಸಲಾಗಿರುವ ಐಐಟಿ ಕ್ಯಾಂಪಸ್ ನ್ನು ಉದ್ಘಾಟನೆ ಮಾಡಲಿದ್ದಾರೆ. ಇದರೊಂದಿಗೆ ಪಂಡಿತ್ ದೀನ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಗ್ರಾಮ ಜ್ಯೋತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ ಸುರಕ್ಷತೆಗೆ ಅಭೂತಪೂರ್ವ ಭದ್ರತೆ ಒದಗಿಸುವುದಾಗಿ ಬಿಹಾರದ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 2013 ರಲ್ಲಿ ಮೋದಿ ಬಿಹಾರಕ್ಕೆ ಭೇಟಿ ನೀಡಿದ್ದಾಗಲೂ ಗಾಂಧಿ ಮೈದಾನದಲ್ಲಿ ಬಾಂಬ್ ಸ್ಫೋಟಗೊಂಡಿತ್ತು.