ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ಶೀತಲ ಸಮರ ಶುಕ್ರವಾರ ಮತ್ತೆ ಮುಂದುವರಿದಿದೆ.
ಇದೀಗ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನುಚಿತ ಪದಪ್ರಯೋಗ ಮಾಡಿದ್ದಾರೆ ಎಂದು ಜಂಗ್ ಆರೋಪಿಸಿದ್ದಾರೆ.
ಈ ಬಗ್ಗೆ ತಿಳಿ ಹೇಳುವುದಕ್ಕಾಗಿ ಜಂಗ್ ಕೇಜ್ರಿವಾಲ್ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಪ್ರಧಾನಿ ವಿರುದ್ಧ ಅನುಚಿತ ಪದ ಪ್ರಯೋಗ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ ಎಂದು ಜಂಗ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ನೀವು ಬರೆದ ಪತ್ರದಲ್ಲಿ ನೀವು ಪ್ರಧಾನಿ ಬಗ್ಗೆ ಹೇಳಿರುವ ರೀತಿಯ ಬಗ್ಗೆ ನನಗೆ ಅಸಮಾಧಾನವಿದೆ. ಪ್ರಧಾನಿ ಮೋದಿ ಬಗ್ಗೆ ಈ ರೀತಿಯ ಪದಪ್ರಯೋಗವನ್ನು ಬಳಸುವುದು ಮುಖ್ಯಮಂತ್ರಿಯಾಗಿರುವ ನಿಮಗೆ ಶೋಭೆ ತರುವುದಿಲ್ಲ ಎಂದು ಜಂಗ್ ಪತ್ರದಲ್ಲಿ ಬರೆದಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ನಿಮ್ಮ ಪತ್ರದ ಬಗ್ಗೆ ದೇಶದಲ್ಲಿ ಮಾತ್ರ ವಿದೇಶಗಳಲ್ಲಿಯೂ ಸುದ್ದಿಯಾಗುತ್ತದೆ. ನಮ್ಮ ದೇಶದ ಗೌರವವನ್ನು ಕಾಪಾಡುವ ದೃಷ್ಟಿಯಲ್ಲಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಅದೇ ವೇಳೆ ನನಗೆ ದೆಹಲಿ ಸರ್ಕಾರದಲ್ಲಿ ಮೂಗು ತೂರಿಸುವ ಇಚ್ಛೆ ಇಲ್ಲ.
ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುತ್ತಾರೆ. ನಾನು ಮುಖ್ಯಮಂತ್ರಿಯವರ ಸ್ಥಾನವನ್ನು ಅವಮಾನಿಸಲು ಇಷ್ಟಪಡುವುದಿಲ್ಲ ಎಂದು ಜಂಗ್ ಪತ್ರದಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮೂಲಕ ದೆಹಲಿ ಸರ್ಕಾರದ ದೈನಂದಿನ ಕಾರ್ಯಕ್ರಮಗಳಿಗೆ ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಂಗ್ ಕೇಜ್ರಿವಾಲ್‌ಗೆ ಈ ಪತ್ರವನ್ನು ಬರೆದಿದ್ದಾರೆ.
ಅದೇ ವೇಳೆ ದೆಹಲಿ ಮಹಿಳಾ ಆಯೋಗಕ್ಕೆ ಸ್ವಾತಿ ಮಹಿವಾಲ್ ಅವರನ್ನು ನೇಮಕ ಮಾಡಿರುವುದಕ್ಕೆ ನನ್ನದೇನೂ ವಿರೋಧವಿಲ್ಲ. ಇದೆಲ್ಲವೂ ಕೇಜ್ರಿವಾಲ್ ಸರ್ಕಾರದ ಆಯ್ಕೆಗೆ ಬಿಟ್ಟದ್ದು ಎಂದು ಜಂಗ್ ಹೇಳಿದ್ದಾರೆ.