ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮೊನ್ ಮರಣದಂಡನೆ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.
ಹಲವು ಗಣ್ಯರು ಯಾಕೂಬ್‌ಗೆ ವಿಧಿಸಲಾಗಿರುವ ಮರಣದಂಡನೆಯನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿದ್ದರು. ಅಲ್ಲದೆ ಸುಪ್ರೀಂಕೋರ್ಟ್ ಯಾಕೂಬ್‌ನ ಕ್ಯುರೇಟಿವ್ ಅರ್ಜಿ ತಿರಸ್ಕರಿಸಲು ತೆಗೆದುಕೊಂಡ ನಿರ್ಣಯದ ಬಗ್ಗೆಯೂ ಪ್ರಶ್ನಿಸಿಕೊಂಡಿದ್ದು ಇಂದು ಯಾವುದೇ ನಿರ್ಧಾರ ಪ್ರಕಟಿಸದೇ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ.
ಯಾಕೂಬ್ ಕ್ಯುರೇಟಿವ್ ಅರ್ಜಿ ತಿರಸ್ಕೃತವಾಗಿರುವಲ್ಲಿ ನ್ಯಾ.ಎ.ಆರ್.ದವೆ ಮತ್ತು ನ್ಯಾ.ಕುರಿಯನ್ ಜೋಸೆಫ್ ಅವರಿದ್ದ ಪೀಠದಲ್ಲಿಯೇ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಕ್ಯುರೇಟಿವ್ ಅರ್ಜಿ ಬಗ್ಗೆ ಇರುವ ನಿಯಮಗಳನ್ನು ವಿವರಿಸುವಂತೆ ಅಟಾರ್ನಿ ಜನರಲ್‌ಗೆ ಪೀಠ ಹೇಳಿದೆ. ಅರ್ಜಿ ಸಂಬಂಧಿಸಿದಂತೆ ನ್ಯಾ.ಜೋಸೆಫ್‌ಗೆ ಹಲವು ಅನುಮಾನಗಳು ಕಾಡಿದರೆ, ನ್ಯಾ.ದವೆ ಒಂದು ಅರ್ಜಿಯನ್ನು ಈ ರೀತಿ ನಡೆಸಿಕೊಂಡರೆ, ನ್ಯಾಯ ಪ್ರಕ್ರಿಯೆಗೇ ಕೊನೆಯೇ ಇಲ್ಲದಂತಾಗುತ್ತದೆ,' ಎಂದು ಹೇಳಿದ್ದಾರೆ.
1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದ ಆರೋಪಿಗಳನ್ನು ದೋಷಿಗಳೆಂದು ನಿರ್ಧರಿಸಿಯಾಗಿದೆ. ಈ ಸಂದರ್ಭದಲ್ಲಿ ಅದರ ಪರಿಶೀಲನೆ ಸಾಧ್ಯವಿಲ್ಲ, ಎಂದು ಕೋರ್ಟ್ ಸ್ಪಷ್ಟಪಡಿಸಿದೆ.