ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಬಗ್ಗೆ ನಗರ ಪ್ರದೇಶದ ಜನರಲ್ಲಿ ಅರಿವು ಮೂಡಿಸುವಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಕೋರಿಕೆಯಂತೆ ದೇಶದ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವಚ್ಛ ಭಾರತ ಜಾಗೃತಿ ಅಬಿsಯಾನವನ್ನು ಹಮ್ಮಿಕೊಂಡಿದ್ದವು. ಈ ಪೈಕಿ 6 ರಾಜ್ಯಗಳು ಅತ್ಯುತ್ತಮ ಸಾಧನೆ ಮಾಡಿವೆ. ಅವೆಂದರೆ, ಕರ್ನಾಟಕ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗೋವಾ ಮತ್ತು ಆಂಧ್ರಪ್ರದೇಶ.
ಕರ್ನಾಟಕ ಫಸ್ಟ್: ಜಾಗೃತಿ ಅಭಿಯಾನದ ಅಂಗವಾಗಿ ದೇಶದ ಒಟ್ಟು 1,129 ನಗರ ಸ್ಥಳೀಯ ಸಂಸ್ಥೆಗಳು ನಗರಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಸ್ವಚ್ಛ ಭಾರತದ ಬಗ್ಗೆ ಅರಿವು ಮೂಡಿಸಲು ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದವು. ಇದರಲ್ಲಿ 14,141 ಶಾಲೆ-ಕಾಲೇಜುಗಳ 3,53,788 ವಿದ್ಯಾರ್ಥಿಗಲು ಪಾಲ್ಗೊಂಡಿದ್ದರು. ಈ ಪೈಕಿ ಕರ್ನಾಟಕದ 96,524 ವಿದ್ಯಾರ್ಥಿಗಳು ಭಾಗವಹಿಸಿದ್ದರೆ, ದೆಹಲಿಯ 47 ಸಾವಿರ, ತಮಿಳುನಾಡಿನ 45,650, ಮಧ್ಯಪ್ರದೇಶದ 45,302, ಗೋವಾದ 35 ಸಾವಿರ ಮತ್ತು ಆಂಧ್ರಪ್ರದೇಶದ 30,871 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಸಲುವಾಗಿ ಒಟ್ಟು ರು.54.95 ಲಕ್ಷ ನೀಡಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಮುಂದಿನ ಸುತ್ತಿನ ಸ್ಪರ್ಧೆ ನಡೆಯಲಿದೆ. ರು.66,009 ಕೋಟಿಯ ಸ್ವಚ್ಛ ಭಾರತ ಯೋಜನೆಯಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರು.1,800 ಕೋಟಿಯನ್ನು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಿಗೆಂದೇ ಮೀಸಲಿಡಲಾಗಿದೆ.