ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ದೀನಾನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನದ ರವಿ ನದಿಯ ಮೂಲಕ ಭಾರತ ಪ್ರವೇಶಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ದಾಳಿಯ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ಗೃಹ ಸಚಿವರು, ಜಿಪಿಎಸ್ ಮಾಹಿತಿ ಪ್ರಕಾರ, ಉಗ್ರರು ಪಾಕಿಸ್ತಾನದಿಂದ ರವಿ ನದಿಯ ಮೂಲಕ ಭಾರತ ಪ್ರವೇಶಿಸಿದ್ದಾರೆ ಎಂದರು.
ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಂಜಾಬ್ ಪೊಲೀಸರನ್ನು ಅಭಿನಂದಿಸಿದ ರಾಜನಾಥ್ ಸಿಂಗ್, ಗಡಿಯಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿರುವವರಿಗೆ ಭಾರತ ತಕ್ಕ ಉತ್ತರ ನೀಡಲಿದೆ ಎಂದರು.
ಒಂದು ಜಿಪಿಎಸ್ ಪರಿಕರದಲ್ಲಿ ತಲ್‍ವಾಂಡಿ, ಪರಮಾನಂದ ಗ್ರಾಮ, ದೀನಾನಗರ ಜಾಗಗಳನ್ನು ಗುರುತುಮಾಡಲಾಗಿದೆ. ಮತ್ತೊಂದರಲ್ಲಿ ಗುರುದಾಸ್‍ಪುರ್ ಜನವಸತಿ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ಈ ಮೂಲಕ ಉಗ್ರರು, ತಮ್ಮ ದಾಳಿಗೆ ಜನನಿಬಿಡ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿರುವುದು ದೃಢಪಟ್ಟಿದೆ.