ಶ್ರೀನಗರ: 1993ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಟೈಗರ್ ಮೆಮನ್ ನನ್ನು ಪಾಕಿಸ್ತಾನದಲ್ಲಿ ಭೇಟಿ ಮಾಡಿದ್ದೆ ಎಂದು ಯಾಕುಬ್ ಮೆಮನ್ ನನ್ನು ನಾಗ್ಪುರ ಜೈಲಿನಲ್ಲಿ ಗಲ್ಲಿಗೆ ಏರಿಸಿದ ದಿನ ಜಮ್ಮು-ಕಾಶ್ಮೀರದ ಕಾಂಗ್ರೆಸ್ ಶಾಸಕ ಉಸ್ಮಾನ್ ಮಜೀದ್ ಸ್ಪೋಟಕ ಮಾಹಿತಿ ನೀಡಿದ್ದಾರೆ.
ತಾನು ಟೈಗರ್ ಮೆಮನ್ ನನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಆತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದ ಎಂದು ಉಗ್ರಗಾಮಿಯಾಗಿ ಈಗ ಸಮಾಜದ ಮುಖ್ಯ ವಾಹಿನಿಗೆ ಬಂದಿರುವ ಕಾಂಗ್ರೆಸ್ ಶಾಸಕ ಉಸ್ಮಾನ್ ಮಜೀದ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಬಂಡೀಪೊರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಮಜೀದ್, ಯಾಕುಬ್ ಮೆಮನ್ ಭಾರತೀಯ ಗುಪ್ತಚರ ಅಧಿಕಾರಿಗಳಿಗೆ ಶರಣಾದ ನಂತರ ಪಾಕಿಸ್ತಾನದ ಗುಪ್ತಚರ ಇಲಾಖೆ ತನ್ನನ್ನು ಹಿಡಿದು ಕೊಲ್ಲಬಹುದೆಂಬ ಭೀತಿಯಿಂದ ಜಿಗುಪ್ಸೆಯಿಂದ ದುಬೈಗೆ ಓಡಿ ಹೋಗಿದ್ದ.ಆದರೆ ಪಾಕಿಸ್ತಾನ ಗುಪ್ತಚರ ಇಲಾಖೆ ಸಂಧಾನ ನಡೆಸಿ ಮತ್ತೆ ಆತನನ್ನು ಪಾಕಿಸ್ತಾನಕ್ಕೆ ಕರೆತಂದಿತ್ತು. ಯಾಕೆಂದರೆ ಟೈಗರ್ ಮೆಮನ್ ಕೂಡ ಶರಣಾಗುವುದು ಗುಪ್ತಚರ ಇಲಾಖೆಗೆ ಇಷ್ಟವಿರಲಿಲ್ಲ. ಅವನಿಗೆ ಸಹ ಶರಣಾಗಲು ಯಾಕುಬ್ ಮೆಮನ್ ವೇದಿಕೆ ಕಲ್ಪಿಸಿಕೊಡುತ್ತಾನೆ ಎಂದು ಇಲಾಖೆ ಅಂದಾಜಿಸಿತ್ತು ಎಂದು ಶಾಸಕ ಉಸ್ಮಾನ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಯಾಕುಬ್ ಶರಣಾಗುವ ಮುನ್ನ ಟೈಗರ್ ಮೆಮನ್ ನ್ನು ಐಎಸ್ ಐ ಚೆನ್ನಾಗಿ ನೋಡಿಕೊಳ್ಳುತ್ತಿತ್ತು. ಆದರೆ ನಂತರ ಆತನಿಗೆ ಮೊದಲಿನ ಗೌರವ, ಸ್ಥಾನಮಾನ ಐಎಸ್ ಐನಿಂದ ಸಿಕ್ಕಿರಲಿಲ್ಲ ಎಂದು ಎಲ್ಲಾ ವಿಷಯಗಳನ್ನು ಉಸ್ಮಾನ್ ಬಹಿರಂಗಪಡಿಸಿದ್ದಾರೆ.
ಸ್ಟೂಡೆಂಟ್ ಲಿಬರೇಶನ್ ಫ್ರಂಟ್ ನ ಸ್ಥಾಪಕ ಮತ್ತು ಇಕ್ ವಾನ್-ಉಲ್-ಮುಸ್ಲಿಮೀನ್ ಉಗ್ರಗಾಮಿ ಬಣದ ಮುಖ್ಯಸ್ಥ ಹಿಲಾಲ್ ಬೇಗ್ ನನ್ನು ಉಸ್ಮಾನ್ ನನ್ನು ಟೈಗರ್ ಗೆ ಪರಿಚಯಿಸಿದ್ದ.
''ನಾನು 1993ರ ಕೊನೆ ಭಾಗದಲ್ಲಿ ಟೈಗರ್ ಮೆಮನ್ ನನ್ನು ಭೇಟಿಯಾಗಿದ್ದೆ. ಆತನನ್ನು 2-3 ಸಲ ಭೇಟಿ ಮಾಡಿದ್ದೇನೆ. ಆತ ಮುಝಫರ್ ಬಾದ್ ಗೆ ಬರುತ್ತಿದ್ದ. ನಾನು ಟೈಗರ್ ಗೆ ಸ್ನೇಹಿತನಾಗಿರಲಿಲ್ಲ. ಪಾಕಿಸ್ತಾನದಲ್ಲಿ ಎರಡು ವರ್ಷಗಳ ಕಾಲ ಇದ್ದೆ. ನಂತರ ಭಾರತಕ್ಕೆ ಬಂದು ಇಲ್ಲಿನ ಅಧಿಕಾರಿಗಳಿಗೆ ಶರಣಾದೆ. ಅಲ್ಲಿಂದ ನಾನು ಬದಲಾಗಿ ಉತ್ತಮ ಪ್ರಜೆಯಾಗಬೇಕು ಅನ್ನಿಸಿತು. 2002ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಚುನಾವಣೆಯಲ್ಲಿ ಗೆದ್ದೆ.ಎಂದು ಉಸ್ಮಾನ್ ತನ್ನ ಪೂರ್ವ ವೃತ್ತಾಂತವನ್ನು ವಿವರಿಸಿದರು.
ನಂತರ ಉಸ್ಮಾನ್, ಮುಫ್ತಿ ಮೊಹಮ್ಮದ್ ಸಯೀದ್ ಅವರ ನೇತೃತ್ವದ ಪಿಡಿಪಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಉಸ್ಮಾನ್ 2014ರ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಜಯಗಳಿಸಿದ್ದರು.