ನವದೆಹಲಿ: ಭಯೋತ್ಪಾದನೆಯನ್ನು ಭಾರತದಿಂದ ಬೇರು ಸಮೇತವಾಗಿ ಕಿತ್ತುಹಾಕವ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಪಂಜಾಬ್ ನ ಗುರುದಾಸ್ ಪುರ ಜಿಲ್ಲೆಯ ದೀನಾನಗರ ಪೊಲೀಸ್ ಠಾಣೆ ಹಾಗೂ ವಿವಿಧ ಜನನಿಬಿಡ ಪ್ರದೇಶದ ಮೇಲೆ ಉಗ್ರರು ನಡೆದಿಸ ದಾಳಿ ಕುರಿತಂತೆ ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳನ್ನು ಬೇರುಸಮೇತವಾಗಿ ಕಿತ್ತುಹಾಕಲುವ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಗಡಿಯಲ್ಲಿ ಈಗಾಗಲೇ ಎಲ್ಲಾ ರೀತಿಯಲ್ಲೂ ಭದ್ರತೆಯನ್ನು ರೂಪಿಸಲಾಗಿದೆ. ದೇಶದ ಏಕತೆ, ನಾಗರಿಕರ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ಶತ್ರುಗಳಿಗೆ ನಮ್ಮ ಯೋಧರು ದಿಟ್ಟ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಉಗ್ರರ ಭಯೋತ್ಪಾದನಾ ಚಟುವಟಿಕೆಗಳನ್ನು ಸದೆಬಡಿಯಲು ಕೇಂದ್ರ ಸರ್ಕಾರ ಈಗಾಗಲೇ ಸರ್ವಸನ್ನದ್ಧವಾಗಿದ್ದು, ಉಗ್ರರನ್ನು ಹಿಮ್ಮೆಟ್ಟಿಸುವ ಶಕ್ತಿ ನಮ್ಮ ಭದ್ರತಾ ಪಡೆಗಳಿಗಿದ್ದು, ಜನತೆ ಆತಂಕ ಪಡಬೇಕಿಲ್ಲ. ಎಂದು ಹೇಳಿದ್ದಾರೆ.
ಗೃಹ ಸಚಿವ ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಸಂಸದರನ್ನು ತರಾಟೆಗೆ ತೆಗೆದುಕೊಂಡ ಉಪಸಭಾಪತಿ ಪಿ.ಜೆ.ಕುರಿಯನ್ ಅವರು, ಘೋಷಣೆ ಕೂಗಲು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಇದು ರಾಜಕೀಯವಲ್ಲ. ದೇಶದ ಭದ್ರತೆಗೆ ಸಂಬಂಧಿಸಿದ್ದು, ಹೀಗಾಗಿ ಈ ಬಗ್ಗೆ ರಾಜಕೀಯವಾಗಿ ಕೂಗಾಟ ನಡೆಸುವುದನ್ನು ಸಂಸದರು ನಿಲ್ಲಿಸಬೇಕು ಎಂದು ಹೇಳಿದರು.