ಮುಂಬೈ: ಕರ್ನಾಟಕದ ಕಾರವಾರ ಮೂಲದ ನರ್ಸ್ ಅರುಣಾ ಶಾನಭಾಗ್ ಅವರ ಸಾವಿಗೆ ಕಾರಣಕರ್ತನಾದ ಸೋಹನ್‍ಲಾಲ್ ಭಾರ್ತಾ ವಾಲ್ಮೀಕಿಗೆ ಈಗ ಸಂಕಷ್ಟದ ದಿನ
ಎದುರಾಗಿದೆ.
ಸೋಹನ್‍ಲಾಲ್‍ನನ್ನು ಗ್ರಾಮದಲ್ಲೇ ಉಳಿಸಿಕೊಳ್ಳಬೇಕೇ, ಬೇಡವೇ ಎನ್ನುವ ಕುರಿತು ನಿರ್ಧರಿಸಲು ಪಂಚಾಯತ್ ಕರೆಯಲಾಗಿದೆ. ಅರುಣಾ ಶಾನಭಾಗ್ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪದಲ್ಲಿ ಶಿಕ್ಷೆ ಅನುಭವಿಸಿದ್ದ ಸೋಹನ್‍ಲಾಲ್ ನಂತರ ಊರುಬಿಟ್ಟಿದ್ದ. ದೆಹಲಿಯಿಂದ 75 ಕಿ.ಮೀ. ದೂರದಲ್ಲಿರುವ ಉತ್ತರಪ್ರದೇಶದ ಪರ್ಪಾ ಗ್ರಾಮದಲ್ಲಿ ನೆಲೆಸಿದ್ದ. ಅರುಣಾ ಸಾವಿನ ನಂತರ ಮಾಧ್ಯಮಗಳಲ್ಲಿ ಈತನ ನೆಲೆ ಪತ್ತೆಯಾಗುತ್ತಿದ್ದಂತೆ ಪರ್ಪಾ ಗ್ರಾಮದಲ್ಲೀಗ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ.
ಮೂರು ದಶಕದಿಂದ ಗ್ರಾಮದಲ್ಲಿ ನೆಲೆಸಿದ್ದರೂ ಗ್ರಾಮಸ್ಥರಿಗ್ಯಾರಿಗೂ ಅರುಣಾ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ತಮ್ಮ ನಡುವೆಯೇ ಇದ್ದಾನೆ ಎನ್ನುವುದು ಗೊತ್ತೇ ಇರಲಿಲ್ಲ. ಮಾಧ್ಯಮದಿಂದಾಗಿ ಈ ವಿಚಾರ ಬಯಲಾಗುತ್ತಿದ್ದಂತೆ ಗ್ರಾಮದ ನೆಮ್ಮದಿ ಹಾಳಾಗಿದೆ. ಅನೇಕರು ಸೋಹನ್‍ಲಾಲ್‍ನನ್ನು ಗ್ರಾಮದಿಂದ ಹೊರಹಾಕುವಂತೆಯೂ ಒತ್ತಡ ಹಾಕುತ್ತಿದ್ದಾರೆ ಎಂದು ಗ್ರಾಮದ ಮುಖ್ಯಸ್ಥ ಜೋಗಿಂದರ್ ಸಿಂಗ್ ಹೇಳಿದ್ದಾರೆ.
ಅರುಣಾ ಹುಟ್ಟುಹಬ್ಬ ಆಚರಣೆ
ಅರುಣಾ ಶಾನಭಾಗ್ ಅವರ 62ನೇ ಜನ್ಮದಿನವನ್ನು ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಆಚರಿಸಲಾಯಿತು. ಆಕೆಯ ಆರೈಕೆ ಮಾಡಿದ ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಅರುಣಾ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಅನೇಕ ದಾದಿಯರು ಈ ವೇಳೆ ಹಾಜರಿದ್ದರು. ಇದೇ ವೇಳೆ, 42 ವರ್ಷ ಕಾಲ ಅರುಣಾ ಅವರನ್ನು ಇರಿಸಿದ್ದ ಕೆಇಎಂ ಆಸ್ಪತ್ರೆಯ ನಂ.4ನೇ ಕೊಠಡಿಗೆ ಅರುಣಾ ಶಾನಭಾಗ್ ಅವರ ಹೆಸರಿಡಲು ದಾದಿಯರು ನಿರ್ಧರಿಸಿದ್ದಾರೆ.