'top10 criminals' ಎಂದು ಗೂಗಲ್ ನಲ್ಲಿ ಹುಡುಕಿದರೆ ಅದರಲ್ಲಿ ನರೇಂದ್ರ ಮೋದಿಯ ಹೆಸರು ಡಿಸ್‌ಪ್ಲೇ ಆಗುತ್ತಿದೆ. ಇದ್ಯಾಕೆ ಹೀಗೆ ? ಮೋದಿಯನ್ನು ಕ್ರಿಮಿನಲ್ ಲಿಸ್ಟ್‌ನಲ್ಲಿ ಸೇರಿಸಿದ್ಯಾರು? ಎಂಬ ಚರ್ಚೆಗಳು ಭಾರೀ ಸುದ್ದಿ ಮಾಡುತ್ತಿವೆ.
ಮೋದಿಯನ್ನು ಕ್ರಿಮಿನಲ್ ಪಟ್ಟಿಯಲ್ಲಿ ತೋರಿಸಿದ್ದು ಮೋದಿ ವಿರೋಧಿಗಳ ಕೈವಾಡ ಎಂದೂ ಭಾವಿಸುವವರಿದ್ದಾರೆ. ಆದರೆ ಗೂಗಲ್ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡವರಿಗೆ ಇದರ ಕತೆ ಏನು ಅಂತ ಗೊತ್ತಿದೆ. ಗೂಗಲ್ ಎಂಬ ಬೃಹತ್ ಸರ್ಚ್ ಇಂಜಿನ್‌ನಲ್ಲಿ ನಾವೊಂದು ಪದವನ್ನು ಸರ್ಚ್ ಮಾಡಿದರೆ ನೂರರಷ್ಟು ಲಿಂಕ್‌ಗಳು ಏಕ ಕಾಲಕ್ಕೆ ಡಿಸ್‌ಪ್ಲೇ ಆಗಿ ಬಿಡುತ್ತವೆ. ಪೇಜ್ ರ್ಯಾಂಕ್, ಡೊಮೈನ್ ನೇಮ್, ಸೋಷ್ಯಲ್ ಮೀಡಿಯಾ ಪ್ರೆಸೆನ್ಸ್, ಶೀರ್ಷಿಕೆ, ಮೆಟಾ ಡಾಟಾ, ಸಮಯ, ದೇಶ, ಕುಕೀಸ್ ಮೊದಲಾದವುಗಳನ್ನು ಆಧರಿಸಿ ನಾವು ಸರ್ಚ್ ಮಾಡಲ್ಪಟ್ಟ ಪದ ಡಿಸ್‌ಪ್ಲೇ ಆಗಿ ಬಿಡುತ್ತದೆ. ಇವೆಲ್ಲವೂ ಒಂದಕ್ಕೊಂದು ಬೆಸೆದು ಕೊಂಡಿದ್ದು, ಅದನ್ನು ಕ್ಷಣ ಮಾತ್ರದಲ್ಲಿ ಡಿಸ್‌ಪ್ಲೇ ಆಗುವಂತೆ ಮಾಡುವ ತಂತ್ರಜ್ಞಾನ ಗೂಗಲ್‌ನಲ್ಲಿದೆ.
Googlebot ಎಂಬ ಗೂಗಲ್‌ನ Search Engine Spiders ಒಂದು ಪೇಜ್‌ನಲ್ಲಿರುವ ಎಲ್ಲ ವಿಷ್ಯಗಳನ್ನು ಪಟ್ಟಿ ಮಾಡಿ ಗೂಗಲ್‌ನ ಡಾಟಾ ಬೇಸ್‌ಗೆ ಶೇಖರಿಸುತ್ತದೆ. ಈ ಪ್ರಕ್ರಿಯೆಗೆ ಇಂಡೆಕ್ಸಿಂಗ್ ಎಂದು ಹೇಳುತ್ತಾರೆ.
ಒಂದು ಪ್ರತ್ಯೇಕ ಪದವನ್ನು ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ನಾವು ಹುಡುಕಿದ ಪದ ಡಿಸ್‌ಪ್ಲೇ ಆಗುವುದು ಈ ಡಾಟಾಬೇಸ್‌ನಿಂದ. ಸರ್ಚ್ ಇಂಜಿನ್ ರ್ಯಾಂಕಿಂಗ್ ಆಧರಿಸಿ ಈ ಲಿಂಕ್‌ಗಳು ಕ್ರಮವಾಗಿ ಡಿಸ್‌ಪ್ಲೇ ಆಗುತ್ತವೆ.
ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO -Search engine optimization) ಒಂದು ಲಿಂಕ್‌ನಲ್ಲಿರುವ ಪ್ರತ್ಯೇಕ ಪದ, ಆ ಪದವು ಗೂಗಲ್‌ನಲ್ಲಿ ಸರ್ಚ್ ಮಾಡಲ್ಪಟ್ಟಿರುತ್ತಿದೆ. ಒಂದು ನಿರ್ದಿಷ್ಟಪದವನ್ನು ನಾನು ಯಾವುದಾದರೂ ಲಿಂಕ್‌ನಲ್ಲಿ ಕೊಟ್ಟಿದ್ದರೆ ಆ ಪದ ಎಲ್ಲೆಲ್ಲಿ ಬಳಕೆಯಾಗಿದೆಯೋ ಅದೆಲ್ಲವನ್ನೂ ಗೂಗಲ್ ನಮಗೆ ಲಿಂಕ್ ಸಹಿತ ಡಿಸ್‌ಪ್ಲೇ ಮಾಡುತ್ತದೆ.
ಇಷ್ಟೆಲ್ಲಾ ಹೇಳಿದ ಮೇಲೆ top10 criminals ಬಗ್ಗೆ ಹೇಳೋಣ. ಟಾಪ್ ಟೆನ್ ಕ್ರಿಮಿನಲ್ಸ್ ಎಂದು ಸರ್ಚ್ ಮಾಡುವಾಗ ಮೋದಿ ಚಿತ್ರ ಯಾಕೆ ಡಿಸ್‌ಪ್ಲೇ ಆಗುತ್ತದೆ?
ಈ ಮೊದಲೇ ಹೇಳಿದಂತೆ ಈ ಸರ್ಚ್ ರಿಸಲ್ಟ್‌ಗಳಲ್ಲಿ ಮೊದಲು ಡಿಸ್‌ಪ್ಲೇ ಆಗುತ್ತಿರುವ ಚಿತ್ರಗಳ ಲಿಂಕ್‌ಗಳನ್ನು ಪರಿಶೀಲಿಸಿದರೆ ಇದಕ್ಕೆ ಉತ್ತರ ಸಿಗುತ್ತದೆ.
ಉದಾಹರಣೆಗೆ
top10 criminals ಎಂದು ಸರ್ಚ್ ಮಾಡಿದಾಗ ಸಿಗುವ ಮೋದಿಯ ಫೋಟೋದ ಲಿಂಕ್ ನೋಡಿ. ಇದು ದ ಟೆಲಿಗ್ರಾಫ್ ಪತ್ರಿಕೆಯ ಲಿಂಕ್
http://www.telegraph.co.uk/news/worldnews/asia/india/10995944/Top-Indian-educationalist-accused-of-racism-over-portrayal-of-criminal-negroes.html
ಇದರಲ್ಲಿ ನರೇಂದ್ರ ಮೋದಿ ಕ್ರಿಮಿನಲ್ ಎಂದು ಹೇಳಲಾಗಿದೆಯೆ?. ಇಲ್ಲ, ಆದರೆ ಸುದ್ದಿಯಲ್ಲಿ Criminal, Narendra Modi ಎಂಬ ಪದಗಳವೆ. ಈ ಎರಡೂ ಪದಗಳು ಗೂಗಲ್ ಡಾಟಾಬೇಸ್‌ನಲ್ಲಿರುವ ಕಾರಣ ಇವೆರಡೂ ಏಕಕಾಲಕ್ಕೆ ಸರ್ಚ್ ಆಗಿ ಡಿಸ್‌ಪ್ಲೇ ಆಗುತ್ತವೆ.
ಆನ್‌ಲೈನ್ ಮಾಧ್ಯಮಗಳಲ್ಲಿ ಬಳಸಲಾದ ಪದಗಳನ್ನು ಗೂಗಲ್ ಸರ್ಚ್ ಮಾಡಿ ಡಿಸ್‌ಪ್ಲೇ ಮಾಡಿದೆಯಷ್ಟೇ. ಸುದ್ದಿ ಮಾಧ್ಯಮಗಳು ಗೂಗಲ್ ನಲ್ಲಿ ಹೆಚ್ಚಿನ ರ್ಯಾಂಕಿಂಗ್ ಪಡೆದುಕೊಂಡವುಗಳಾಗಿದ್ದ ಕಾರಣ ಈ ಲಿಂಕ್‌ಗಳು ಬೇಗನೆ ಡಿಸ್‌ಪ್ಲೇ ಆಗಿ ಬಿಡುತ್ತವೆ.
ಆದಾಗ್ಯೂ, ಗೂಗಲ್ ಇಂಡೆಕ್ಸ್ ಮಾಡುವಾಗ ಶೀರ್ಷಿಕೆಗಳಲ್ಲಿ ನೀಡಲ್ಪಡುವ ಪದಗಳಿಗೆ ಹೆಚ್ಚಿನ ಆದ್ಯತೆ ನೀಡಿ ಡಾಟಾ ಸೇವ್ ಮಾಡಲ್ಪಟ್ಟಿರುತ್ತದೆ. ಹೀಗಿರುವಾಗ ಹೆಡ್‌ಲೈನ್‌ನಲ್ಲಿ ಕ್ರಿಮಿನಲ್ ಎಂಬ ಪದ ಇಲ್ಲಿ ಸರ್ಚ್ ಆಗಲ್ಪಟ್ಟು, ಆ ಸುದ್ದಿಯಲ್ಲಿರುವ ನರೇಂದ್ರ ಮೋದಿ ಎಂಬ ಪದವೂ ಜತೆಗೆ ಸರ್ಚ್ ಆಗಿರುವ ಕಾರಣವೇ ಟಾಪ್ 10 ಕ್ರಿಮಿನಲ್ ಪಟ್ಟಿಯಲ್ಲಿ ನರೇಂದ್ರ ಮೋದಿ ಹೆಸರು ಬಂದಿರುವುದು.
ಏನೋ ಮಾಡಲು ಹೋಗಿ ಇನ್ನೇನೋ ಆಯ್ತು!
Top 10 Criminals ಎಂಬ ಪದ ಸರ್ಚ್ ಮಾಡುವಾಗ ನರೇಂದ್ರ ಮೋದಿಯ ಫೋಟೋ ಮೊದಲಿಗೆ ಬರುತ್ತಿದೆ ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಯಿತು. ಗೂಗಲ್‌ಗೆ ಸಿಕ್ಕಾಪಟ್ಟೆ ಬೈದು, ಇದು ಸಾಮಾಜಿಕ ತಾಣಗಳಲ್ಲಿ ಟ್ರೆಂಡಿಂಗ್ ವಿಷಯವೂ ಆಯ್ತು. ಇದರ ಪರಿಣಾಮ ಈಗ ಮೋದಿ, ಕ್ರಿಮಿನಲ್ ಎಂಬ ಪದಗಳನ್ನು ಹೊಂದಿರುವ ಸಾಕಷ್ಟು ವೆಬ್ ಪೇಜ್‌ಗಳು ಹುಟ್ಟಿಕೊಳ್ಳುವಂತಾಯ್ತು. ಅದು ಹೇಗೆ ಗೊತ್ತಾ?
Narendra Modi in top ten Criminal List – Google apologizes ಎಂಬ ಶೀರ್ಷಿಕೆ ನೋಡಿ. ಇದರಲ್ಲಿ ಮೋದಿ, ಕ್ರಿಮಿನಲ್ ಎಂಬ ಎರಡೂ ಪದಗಳಿವೆ. ಇನ್ನು ಮುಂದೆಯೂ ಮೋದಿ ಕ್ರಿಮಿನಲ್ ಅಲ್ಲ ಎಂದು ಸುದ್ದಿ ಮಾಡಿದರೂ, ಆ ಸುದ್ದಿಯಲ್ಲಿ ಮೋದಿ ಮತ್ತು ಕ್ರಿಮಿನಲ್ ಎಂಬ ಪದಗಳು ಇರುವ ಕಾರಣ ಮೋದಿ ಎಂದು ಸರ್ಚ್ ಮಾಡಿದಾಗ ಮೋದಿ ಕ್ರಿಮಿನಲ್ ಅಲ್ಲ ಎನ್ನುವ ಸುದ್ದಿಯ ಜತೆಗೆ ಮೋದಿಯ ಫೋಟೋ ಲಗತ್ತಿಸಿದ್ದರೆ, ಟಾಪ್ 10 ಕ್ರಿಮಿನಲ್ ಪಟ್ಟಿಯಲ್ಲಿ ಇಮೇಜ್ ಸರ್ಚ್ ಮಾಡುವಾಗ ಮೋದಿ ಫೋಟೋ ಡಿಸ್‌ಪ್ಲೇ ಆಗುತ್ತಲೇ ಇರುತ್ತದೆ. ಗೂಗಲ್ ಇಮೇಜ್‌ನಲ್ಲಿ ಹೋಗಿ ಟಾಪ್ 10 ಕ್ರಿಮಿನಲ್ಸ್ ಎಂದು ಸರ್ಚ್ ಮಾಡಿದರೆ ಮೋದಿ ಚಿತ್ರ ಡಿಸ್‌ಪ್ಲೇ ಆಗುತ್ತದೆ. ಅಲ್ಲಿಯೇ These results don’t reflect Google’s opinion or our beliefs; our algorithms automatically matched the query to web pages with these images. ಎಂಬ ವಾಕ್ಯವೂ ಡಿಸ್‌ಪ್ಲೇ ಆಗುತ್ತಿರುವುದು ಯಾಕೆ ಅಂತ ಗೊತ್ತಾಯ್ತು ಅಲ್ವಾ?