ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಎರಡು ದಿನಗಳ ಮೊದಲ ಬಾಂಗ್ಲಾದೇಶ ಪ್ರವಾಸ ಶನಿವಾರದಿಂದ ಆರಂಭವಾಗಲಿದೆ. ಪಶ್ಚಿಮ ಬಂಗಾಳ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಪ್ರಧಾನಿಗೆ ಈ ವೇಳೆ ಸಾಥ್ ನೀಡುತ್ತಿರುವುದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಭಾಷ್ಯ ಬರೆಯುವ ಭರವಸೆ ಮೂಡಿಸಿದೆ. ಬಾಂಗ್ಲಾ ಮತ್ತು ಭಾರತ ಎರಡೂ ದೇಶಗಳ ಪಾಲಿಗೆ ತಲೆ
ನೋವಾಗಿ ಪರಿಣಮಿಸಿದ್ದ ಭೂ ಗಡಿ ಒಪ್ಪಂದ(ಎಲ್ ಬಿಎ)ಕ್ಕೆ ಸಂಸತ್ತಿನ ಅನುಮೋದನೆ ಸಿಕ್ಕಬೆನ್ನಲ್ಲೇ ಮೋದಿ ಈ ಪ್ರವಾಸ ಕೈಗೊಳ್ಳು ತ್ತಿದ್ದಾರೆ. ಮೂಲಗಳ ಪ್ರಕಾರ ತೀಸ್ತಾ ನೀರು ಹಂಚಿಕೆ ವಿಚಾರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನಡುವಿನ ಮಾತುಕತೆಯಲ್ಲಿ ಪ್ರಸ್ತಾಪವಾಗದಿದ್ದರೂ ಗಡಿ ವ್ಯಾಪಾರ, ಸಂಪರ್ಕ, ಹೂಡಿಕೆ, ರಕ್ಷಗೆ ಸಂಬಂಧಿಸಿದ ಒಪ್ಪಂದ ಗಳಿಗೆ ಈ ವೇಳೆ ಅಂಕಿತ ಬೀಳಲಿದೆ. ಇದೇ ವೇಳೆ ಮೋದಿ ಅವರು ಬಾಂಗ್ಲಾಗೆ ಹೊಸದಾಗಿ ಹಣಕಾಸು ನೆರವು ನೀಡುವ ನಿರ್ಧಾರವನ್ನೂ ಪ್ರಕಟಿಸಲಿದ್ದಾರೆ.
ಬಸ್ ಸಂಚಾರಕ್ಕೆ ಚಾಲನೆ: ಪ್ರವಾಸದ ಭಾಗವಾಗಿ ಎರಡೂ ದೇಶಗಳನ್ನು ಜೋಡಿ ಸುವ ಕೋಲ್ಕತಾ- ಢಾಕಾ- ಅಗರ್ತಲಾ ಹಾಗೂ ಢಾಕಾ- ಶಿಲ್ಲಾಂಗ್- ಗುವಾಹಟಿ ಮಾರ್ಗಗಳ ನಡುವಿನ ಬಸ್ ಸಂಚಾರಕ್ಕೂ ಚಾಲನೆ ಸಿಗಲಿದೆ. ಮಮತಾ ಬ್ಯಾನರ್ಜಿ ಅವರು ಇದಕ್ಕಾಗಿ ಶುಕ್ರವಾರ ರಾತ್ರಿಯೇ ಢಾಕಾಗೆ ತೆರಳಿದ್ದು, ಕೋಲ್ಕತಾ- ಢಾಕಾ
ಬಸ್ ಸಂಚಾರಕ್ಕೆ ಚಾಲನೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದ್ದೂರಿ ಸ್ವಾಗತ
ಮೋದಿ ಅವರು ಇದೇ ಮೊದಲ ಬಾರಿಗೆ ನೆರೆಯ ಬಾಂಗ್ಲಾಗೆ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಢಾಕಾದಲ್ಲಿ ಅದ್ಧೂರಿ ಸ್ವಾಗತ ನೀಡಲು ಶೇಖ್ ಹಸೀನಾ ನಿರ್ಧರಿಸಿದ್ದಾರೆ. ಮೋದಿ,ಇಂದಿರಾ, ಮಮತಾ ಬ್ಯಾನರ್ಜಿ ಹಾಗೂ ಬಾಂಗ್ಲಾದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಬೃಹತ್ ಕಟೌಟ್‍ಗಳನ್ನು ಪ್ರಮುಖ ರಸ್ತೆಗಳುದ್ದಕ್ಕೂ ಸ್ಥಾಪಿಸಲಾಗಿದೆ. ಒಂದು ರೀತಿಯಲ್ಲಿ ಢಾಕಾದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.