ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕೇಂದ್ರ ಸರ್ಕಾರ, ಜೂ.10 ರಂದು ಯೋಗ ದಿನಕ್ಕಾಗಿ ಮೈಕ್ರೋಸೈಟ್ ನ್ನು ಬಿಡುಗಡೆ ಮಾಡಿದೆ.
ವಿದೇಶಾಂಗ ವ್ಯವಹಾರ ಖಾತೆ ವೆಬ್ ಸೈಟ್ ನ ಭಾಗವಾಗಿರುವ ಮೈಕ್ರೋಸೈಟ್ ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ.21 ರಂದು ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಮೈಕ್ರೋ ಸೈಟ್ ನಲ್ಲಿ ಯೋಗಕ್ಕೆ ಸಂಬಂಧಿಸಿದ ಶಶಾಂಕಾಸನದ ವಿಡಿಯೋ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಯೋಗ ಕ್ರಿಯೆಯಲ್ಲಿ ಇದು ಮಾದರಿ ಅಸನವಾಗಿದ್ದು ಈ ಆಸನದಿಂದಾಗಿ ಒತ್ತಡ ಮತ್ತು ಕೋಪ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಯೋಗ ದಿನವನ್ನು ಆಚರಿಸಲು ಭಾರತೀಯ ಸೇನೆ ಸಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೂ.21 ರಂದು ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾರತ-ಅಮೇರಿಕ ಸಂಸ್ಥೆಗಳ ಹಾಗೂ ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ಸಹ ರಾಜಪಥದಲ್ಲಿ ಯೋಗ ಪ್ರದರ್ಶನ ಮಾಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಮೋದಿ ರಾಜಪಥದಲ್ಲಿ ಯೋಗ ಪ್ರದರ್ಶನ ಮಾಡುವುದಿಲ್ಲ ಎಂದು ಹೇಳಿದ್ದಾರೆ.