ದೇಶ

ಕಾಶ್ಮೀರದಲ್ಲಿ ಇಸಿಸ್, ಪಾಕ್ ಧ್ವಜ ಹಾರಾಟ

Srinivasamurthy VN

ಶ್ರೀನಗರ: ಕಾಶ್ಮೀರದಲ್ಲಿ ಶುಕ್ರವಾರ ಮತ್ತೆ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಧ್ವಜದ ಹಾರಾಟ ಮಾಡಿದ್ದು, ಜಾಮಿಯಾ ಮಸೀದಿ ಬಳಿ ನಡೆದ ಯುವಕರ ಮೆರವಣಿಗೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಧ್ವಜ ಪ್ರದರ್ಶನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯೇಕತಾವಾದಿಗಳು ಭಾರತ ಸರ್ಕಾರದ ಎಚ್ಚರಿಕೆಯ ನಡುವೆಯೂ ಪದೇ ಪದೇ ಪ್ರತಿಭಟನೆ ವೇಳೆ ಪಾಕಿಸ್ತಾನ ಧ್ವಜ ಹಾರಾಟ ಮಾಡುತ್ತಿದ್ದು, ಇಂದು ಮತ್ತೆ ಕಾಶ್ಮೀರದ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಪಾಕ್ ಧ್ವಜ ಮತ್ತು ಇಸಿಸ್ ಉಗ್ರ ಸಂಘಟನೆ ಧ್ವಜ ಪ್ರದರ್ಶನ ಮಾಡಿದ್ದಾರೆ. ಶ್ರೀನಗರದ ನೋವಟ್ಟಾ ಚೌಕದ ಬಳಿ ಇರುವ ಜಾಮಾ ಮಸೀದಿಯ ಪ್ರದೇಶದಲ್ಲಿ ರ್ಯಾಲಿ ನಡೆಸುತ್ತಿದ್ದ ಮುಸುಕುದಾರಿ ಯುವಕರ ತಂಡ ಇಸಿಸ್ ಘೋಷಣೆಗಳಿರುವ ಫಲಕಗಳನ್ನು ಮತ್ತು ಇಸಿಸ್ ಉಗ್ರ ಸಂಘಟನೆಯ ಧ್ವಜವನ್ನು ಹಾರಿಸಿದ್ದಾರೆ. ಅಲ್ಲದೆ ರ್ಯಾಲಿಯಲ್ಲಿ ಪಾಕ್ ಪರ ಘೋಷಣೆಗಳನ್ನೂ ಕೂಡ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ರ್ಯಾಲಿಗೆ ಭಾರತೀಯ ಸೇನೆಯ ಭದ್ರತಾಪಡೆಗಳು ಅಡ್ಡಿ ಪಡಿಸಿದ್ದು, ಪ್ರತಿಭಟನಾ ನಿರತ ಯುವಕರನ್ನು ತಡೆಯಲು ಮುಂದಾದಾಗ ಆಕ್ರೋಶಗೊಂಡ ಅವರು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಹುರಿಯತ್ ನಾಯಕ ಮೀರವೈಜ್ ಉಮರ್ ಫಾರೂಖ್ ಕೂಡ ಸ್ಥಳದಲ್ಲಿಯೇ ಇದ್ದರು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಇದೀಗ ಪ್ರಕ್ಷುಬ್ದ ವಾತಾವರಣ ನೆಲೆಸಿದ್ದು, ಹಿರಿಯ ಸೇನಾಧಿಕಾರಿಗಳು ದೌಡಾಯಿಸಿದ್ದಾರೆ.

SCROLL FOR NEXT