ದೇಶ

ವೋಟಿಗಾಗಿ ನೋಟು: ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಆಡಿಯೋ ಟೇಪ್

ಹೈದರಾಬಾದ್: ವೋಟಿಗಾಗಿ ನೋಟು ಪ್ರಕರಣ ಇದೀಗ ಆಂಧ್ರ ತೆಲಂಗಾಣ ಎರಡು ರಾಜ್ಯಗಳ ಮಧ್ಯೆ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು, ಪ್ರಕರಣ ಸಂಬಂಧ ಆಂಧ್ರ ಮುಖ್ಯಮಂತ್ರಿ ಮಾತನಾಡಿದ್ದ ಆಡಿಯೋ ಟೇಪ್ ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆ ಶನಿವಾರ ರವಾನಿಸಿದೆ ಎಂದು ಹೇಳಲಾಗುತ್ತಿದೆ.

ತೆಲಂಗಾಣ ವಿಧಾನಸಭೆಯಿಂದ ವಿಧಾನ ಪರಿಷತ್‌ ನಡೆಯುವ ಚುನಾವಣೆಯಲ್ಲಿ ಬಿಜೆಪಿ–ಟಿಡಿಪಿ ಅಭ್ಯರ್ಥಿಗೆ ಮತ ನೀಡುವಂತೆ ಟಿಆರ್‌ಎಸ್‌ ನಾಮನಿರ್ದೇಶಿತ ಶಾಸಕ ಸ್ಟೀಫನ್‌ಸನ್‌ ಅವರಿಗೆ ಟಿಡಿಪಿ ಹಣದ ಆಮಿಷ ಒಡ್ಡಿತ್ತು ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲೇ ಶಾಸಕ ಎಲ್ವಿನ್ ಸ್ಟೀಫನ್ ಸನ್ ಅವರ ಜೊತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತನಾಡಿರುವ ಆಡಿಯೇ ಟೇಪ್ ವೊಂದು ಮಾಧ್ಯಮಗಳಲ್ಲಿ ಮೇ,8 ರಂದು ಬಿಡುಗಡೆಯಾಗಿತ್ತು.

ಈ ಪ್ರಕರಣವು ಆಂಧ್ರ ಹಾಗೂ ತೆಲಂಗಾಣ ಎರಡು ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಪ್ರತಿಪಕ್ಷಗಳು ವಾಗ್ವಾದಗಳಿಗೆ ಮುಂದಾಗಿವೆ. ಒಂದೆಡೆ ಟಿಡಿಪಿ ಇದು ಟಿಆರ್ಎಸ್ ರೂಪಿಸಿರುವ ಷಡ್ಯಂತ್ರ ಎಂದು ಆರೋಪ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಟಿಆರ್ಎಸ್ ದೂರವಾಣಿಯಲ್ಲಿರುವ ಧ್ವನಿ ಮುದ್ರಿಕೆ ಚಂದ್ರಬಾಬು ನಾಯ್ಡು ಅವರದ್ದೇ ಎಂದು ಹೇಳುತ್ತಿದೆ.

ಪ್ರಕರಣ ಸಂಬಂಧ ತನಿಖೆ ವೇಳೆ ಭ್ರಷ್ಟಾಚಾರ ನಿಗ್ರಹದಳಕ್ಕೆ ದೊರಕಿರುವ ಮೊಬೈಲ್ ಗಳು, ಆಡಿಯೋ ಟೇಪ್ ಹಾಗೂ ವೀಡಿಯೋಗಳು ಸೇರಿದಂತೆ ಇನ್ನಿತರೆ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದು, ಇನ್ನು ಎರಡು ಮೂರು ದಿನಗಳ ಒಳಗಾಗಿ ಸತ್ಯಾಂಶಗಳು ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT