ಶಂಕಿತ ಬೊಡೋ ಉಗ್ರರು 
ದೇಶ

ಶಂಕಿತ ಬೊಡೋ ಉಗ್ರರ ಸೆರೆ

ಅಸ್ಸಾಂ ಹಿಂಸಾಚಾರದಲ್ಲಿ ಭಾಗಿಯಾಗಿ ಅಲ್ಲಿಂದ ತಲೆಮರೆಸಿಕೊಂಡು ನಗರದಲ್ಲಿ ನೆಲೆಸಿದ್ದ ನಾಲ್ವರು ಶಂಕಿತ ಬೋಡೋ ಉಗ್ರರನ್ನು ರಾಜ್ಯ ಆಂತರಿಕ ಭದ್ರತಾ ದಳ...

ಬೆಂಗಳೂರು: ಅಸ್ಸಾಂ ಹಿಂಸಾಚಾರದಲ್ಲಿ ಭಾಗಿಯಾಗಿ ಅಲ್ಲಿಂದ ತಲೆಮರೆಸಿಕೊಂಡು ನಗರದಲ್ಲಿ ನೆಲೆಸಿದ್ದ ನಾಲ್ವರು ಶಂಕಿತ ಬೋಡೋ ಉಗ್ರರನ್ನು ರಾಜ್ಯ ಆಂತರಿಕ ಭದ್ರತಾ ದಳ ನೆರವಿನೊಂದಿಗೆ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಸಂದನ್ ಬಸುಮತ್ರಿ, ನಸೀನ್ ಬಸುಮತ್ರಿ, ಜಿಬೆಲ್ ನರ್ಸರಿ ಹಾಗೂ ತೋಮರ್ ಬಸುಮತ್ರಿ ಬಂಧಿತರು. 19ರಿಂದ 20ರ ವಯೋಮಾನದ ನಾಲ್ವರು ಆರೋಪಿಗಳು, ಕಳೆದ 3 ತಿಂಗಳಿಂದ ಪೀಣ್ಯ ಸಮೀಪದ ಜಿಕೆಡಬ್ಲ್ಯೂ ಬಡಾವಣೆಯ ಲ್ಲಿರುವ ಮನೆಯೊದರ ಮೂರನೇ ಮಹಡಿಯಲ್ಲಿ ಬಾಡಿಗೆಗಿದ್ದರು. ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ಪೈಪ್ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ಸಾಂ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಅಸ್ಸಾಂ ಪೊಲೀಸರು, ಪ್ರಕರಣ ದಲ್ಲಿ ಭಾಗಿಯಾಗಿರುವ ಆರೋಪಿಗಳಿಗಾಗಿನಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ, ಅಸ್ಸಾಂನಲ್ಲಿರುವ ಸಂಬಂಧಿಕರೊಂದಿಗೆ ಬಂಧಿತರು ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿರುವುದು ತಿಳಿದು ಬಂದಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಸ್ಸಾಂ ಪೋಲೀಸರು, ರಾಜ್ಯ ಆಂತರಿಕ ಭದ್ರತಾ ದಳ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಕೋರಿದ್ದರು. ಮೊಬೈಲ್  ಫೋನ್ ಸಂಖ್ಯೆಗಳ ಆಧಾರದ ಮೇಲೆ ಆರೋಪಿಗಳು ಜಿಕೆಡಬ್ಲ್ಯೂ ಬಡಾವಣೆಯಲ್ಲಿರುವ ಬಗ್ಗೆಮಾಹಿತಿ ಸಿಕ್ಕಿತ್ತು. ರಾಜ್ಯಕ್ಕೆ ಆಗಮಿಸಿದ ಅಸ್ಸಾಂ ಪೊಲೀಸರು, ಶನಿವಾರ ಬೆಳಗ್ಗೆ ರಾಜ್ಯ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಮನೆಯಿಂದ, ಮತ್ತಿಬ್ಬರು ಆರೋಪಿಗಳನ್ನು ಸಮೀಪದ ಪ್ರದೇಶದಿಂದ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿ ವಶಕ್ಕೆ ತೆಗೆದುಕೊಂಡು ಅಸ್ಸಾಂಗೆ ಕರೆದೊಯ್ಯಲಿದ್ದಾರೆ. ಈ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಖಾನೆಯವರೇ ನಾಲ್ವರಿಗೆ ಮನೆ ಬಾಡಿಗೆ ಕೊಡಿ ಎಂದು ಕೇಳಿದ್ದರು. ಹೀಗಾಗಿ, ಅವರಿಗೆ ಮನೆ ಬಾಡಿಗೆ ನೀಡಲಾಗಿತ್ತು. ಅವರಾಗಿಯೇ ಬಂದು ಮನೆ ಬಾಡಿಗೆ ಕೇಳಿರಲಿಲ್ಲ. ರು.30 ಸಾವಿರ ಮುಂಗಡ ಕಟ್ಟಿ ತಿಂಗಳಿಗೆ ಮೂರೂವರೆ ಸಾವಿರ ಬಾಡಿಗೆ ನೀಡುತ್ತಿದ್ದರು. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುತ್ತಿದ್ದರು. ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಯಾವುದೇ ರೀತಿ ಅನುಮಾನಾಸ್ಪದವಾಗಿ ವರ್ತಿಸಿದ್ದು ಕಂಡು ಬಂದಿಲ್ಲ ಎಂದು ಮನೆ ಬಾಡಿಗೆ ನೀಡಿದ್ದ ಮಾಲೀಕ ಶಾಂತಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಏನಿದು ಅಸ್ಸಾಂ ಹಿಂಸಾಚಾರ?: 2015ರ ಜನವರಿಯಲ್ಲಿ ಬೋಡೋ ಉಗ್ರ ಸಂಘಟನೆಯ ಪ್ರಮುಖ ನಾಯಕ ಬಿಖಾಂಗ್ ಬಸುಮತ್ರಿ ಎಂಬಾತನನ್ನು ಅಸ್ಸಾಂನಲ್ಲಿ ಬಂಧಿಸಲಾಗಿತ್ತು. ಆರೋಪಿ, 2014ರ ಮೇ ತಿಂಗಳಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. 2013ರ ಜನವರಿಯಲ್ಲಿ ಕೊಕ್ರಾಜರ್ ನಲ್ಲಿ 6 ಮಂದಿ ಹಿಂದಿ ಭಾಷಿಕರನ್ನು ಹತ್ಯೆಗೈದಿರುವ ಆರೋಪ ಹಾಗೂ 2014ರ ಡಿಸೆಂಬರ್ 23ರಂದು 8 ಆದಿವಾಸಿಗಳನ್ನು ಕೊಲೆ ಮಾಡಿರುವ ಆರೋಪಿ ಬಿಖಾಂಗ್ ಮೇಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಿಖಾಂಗ್ ಅವರ ತಂಡದಲ್ಲೇ ಬಂಧಿತ ನಾಲ್ವರು ಕೂಡಾ ಇದ್ದರು. ಇವರ
ವಿರುದ್ಧ ಕೊಲೆ ಯತ್ನ, ದೊಂಬಿ, ಶಸ್ತ್ರಾಸ್ತ್ರ ಕಾಯ್ದೆ, ಪೊಲೀಸರ ಮೇಲೆ ಹಲ್ಲೆ ಸೇರಿ ದಂತೆ ಹತ್ತಾರು ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆಂತರಿಕ ಭದ್ರತಾ ದಳದ ಹಿರಿಯ ಅಧಿಕಾರಿಯೊಬ್ಬರು `ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.


ಬೆಂಗಳೂರು ಆಶ್ರಯ ತಾಣ?
ದೇಶದಲ್ಲೇ ಅತಿ ಹೆಚ್ಚು ಈಶಾನ್ಯ ಭಾರತೀಯರು ವಾಸವಿರುವ ಪ್ರಮುಖ ನಗರಗಳ ಪೈಕಿ ಬೆಂಗಳೂರು ಕೂಡಾ ಒಂದು. ಅನ್ಯ ಭಾಷಿಕರ ಪಾಲಿಗೆ ಬೆಂಗಳೂರು ನಗರ ಸುರಕ್ಷಿತ ಎನ್ನುವ ಕಾರಣಕ್ಕೆ ಶಿಕ್ಷಣ, ಹೊಟೇಲ್‍ಗಳಲ್ಲಿ ಉದ್ಯೋಗ, ಬ್ಯೂಟಿ ಪಾರ್ಲರ್, ಬಟ್ಟೆ ವ್ಯಾಪಾರ ಹೀಗೆ ಹಲವು ಅವಕಾಶಗಳ ಇರುವುದರಿಂದ ಸಾವಿರಾರು ಈಶಾನ್ಯ ಭಾರತೀಯರು ಇಲ್ಲಿ ನೆಲೆಸಿದ್ದಾರೆ. ನಗರದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳಲ್ಲಿ ಸುಲಭವಾಗಿ ಕೆಲಸ ಸಿಗುತ್ತದೆ. ಶಾಂತಿನಗರ, ಬಾಗಲೂರು, ಬಾಣಸವಾಡಿ, ಎಚ್‍ಆರ್‍ಬಿಆರ್ ಬಡಾವಣೆ, ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಈಶಾನ್ಯ ಭಾರತೀಯರು ನೆಲೆಸಿದ್ದಾರೆ. ಹೀಗಾಗಿ, ಆ ಜನರ ನಡುವೆ ನೆಲೆಸಿದರೆ ಪೊಲೀಸರಿಗೆ ಯಾವ ಅನುಮಾನವೂ ಬರುವುದಿಲ್ಲ ಎನ್ನುವ ಕಾರಣಕ್ಕೆ ಶಂಕಿತ ಉಗ್ರರು ನಗರಕ್ಕಾಗಮಿಸುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು. ಅಸ್ಸಾಂನಲ್ಲಿ ದುಷ್ಕೃತ್ಯದಲ್ಲಿ ಭಾಗಿಯಾಗಿ ಬೆಂಗಳೂರಿಗೆ ಬಂದು ಉಗ್ರರು ಆಶ್ರಯ ಪಡೆಯುತ್ತಿರುವುದು ಇದೇ ಮೊದಲೇನಲ್ಲ. 2015ರ ಜನವರಿ ತಿಂಗಳಲ್ಲಿ ಸಂಜು ಬೊರ್ಡೊಲಾಯ್ ಹಾಗೂ ಫೆಬ್ರವರಿ ತಿಂಗಳಲ್ಲಿ ಜೊರ್ಡಾನ್ ಎಂಬಾತನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ನಗರದಲ್ಲಿ ಇನ್ನಷ್ಟು ಶಂಕಿತ ಉಗ್ರರು ಅಡಗಿರುವ ಸಾಧ್ಯತೆಗಳಿದ್ದು, ಅವರ ಬಂಧನಕ್ಕೆ ಅಸ್ಸಾಂ ಪೊಲೀಸರು ರಾಜ್ಯ ಆಂತರಿಕ ಭದ್ರತಾ ದಳ ಪೊಲೀಸರ ನೆರವು ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

Ranji Trophy: ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಮತ್ತು 185 ರನ್ ಭರ್ಜರಿ ಜಯ

Ranji Trophy: ಒಂದೂ ರನ್ ನೀಡದೇ 5 ವಿಕೆಟ್.. Amit Shukla ಐತಿಹಾಸಿಕ ದಾಖಲೆ, IPL 2026 ಹರಾಜಿಗೆ ಭರ್ಜರಿ ಸಿದ್ಧತೆ!

'Glad Was In Audience': ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್, ಗುಲಾಮ ಮನಸ್ಥಿತಿ ಕುರಿತ ಹೇಳಿಕೆ, ಕಾಂಗ್ರೆಸ್ ಕೆಂಡ!

ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ಸುರೇಶ್ ಕುಮಾರ್; ಅನುಭವ ಹಂಚಿಕೊಂಡ ಬಿಜೆಪಿ ಶಾಸಕ

SCROLL FOR NEXT