ನವದೆಹಲಿ: ಸಚಿವೆ ಸುಷ್ಮಾ ಸ್ವರಾಜ್- ಲಲಿತ್ ಮೋದಿ ವಿವಾದ ಸುದ್ದಿಯಾಗುತ್ತಿರುವ ನಡುವೆಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಮೊಮ್ಮಗಳ ಉದ್ಯೋಗಕ್ಕಾಗಿ ಎಸ್ಸಾರ್ ಕಂಪನಿ ಮೇಲೆ ಒತ್ತಡ ಹೇರಿದ್ದರು ಎಂಬ ವಿಚಾರ ಏಕೆ ಬಿಸಿಯೇರಲಿಲ್ಲ ಎಂಬ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗಿದೆ. ಪ್ರಣಬ್ ಮೊಮ್ಮಗಳು ಸುಚಿಸ್ಮಿತಾ ಮುಖರ್ಜಿಗೆ ಎಸ್ಸಾರ್ ಕಂಪನಿಯ ಲಂಡನ್ ಕಚೇರಿಯಲ್ಲಿ ಕೆಲಸ ಕೊಡಿಸುವ ಬಗ್ಗೆ ರಾಷ್ಟ್ರಪತಿ ಭವನ ಮತ್ತು ಎಸ್ಸಾರ್ ಗ್ರೂಪ್ ನಡುವೆ ನಡೆದ ಇ-ಮೇಲ್ ಸಂದೇಶಗಳನ್ನು `ದಿ ಕಾರವಾನ್' ಪ್ರಕಟಿಸಿದೆ. ರಾಷ್ಟ್ರಪತಿ ಪ್ರಣಬ್‍ರ ಆಪ್ತ ಕಾರ್ಯದರ್ಶಿ ಪ್ರದೀಪ್ ಗುಪ್ತಾ ಅವರು 2013ರ ಸೆ.26ರಂದು ಸುಚಿಸ್ಮಿತಾಳ ಪಾಸ್ ಪೋರ್ಟ್ ಅನ್ನು ಎಸ್ಸಾರ್ ಗ್ರೂಪ್‍ನ ಅಧಿಕಾರಿ ಅಲೋಕ್ ಚೌಹಾಣ್ ರಿಗೆ ಕಳುಹಿಸಿದ್ದರು ಎಂಬುದನ್ನೂ ಪತ್ರಿಕೆ ವರದಿ ಮಾಡಿದೆ.ಜತೆಗೆ, ಸುಚಿಸ್ಮಿತಾಳನ್ನು ಇಂಟರ್ನಿಯಾಗಿ ನೇಮಕ ಮಾಡುವುದೋ ಅಥವಾ ಕಾಯಂ ಆಗಿ ಕೆಲಸಕ್ಕಿಟ್ಟುಕೊಳ್ಳುವುದೋ ಎಂಬ ಬಗ್ಗೆ ಎಸ್ಸಾರ್ ಗ ಗ್ರೂಪ್‍ನ ಉನ್ನತ ಅಧಿಕಾರಿಗಳ ನಡುವೆ ನಡೆದ ಸಂಭಾಷಣೆಗಳು, ಇಮೇಲ್‍ಗಳೂ ಪತ್ರಿಕೆಗೆ ದೊರೆತಿವೆ. ಇದಕ್ಕೂ ಮೊದಲು ಎಸ್ಸಾರ್ ಗ್ರೂಪ್ನ ಸುನೀಲ್ ಬಜಾಜ್ ಅವರು ಕಂಪನಿಯ ಹಿರಿಯ ಹಿರಿಯ ಉಪಾಧ್ಯಕ್ಷ ರಾಹುಲ್ ತನೇಜಾಗೆ ಅತ್ಯಂತ ರಹಸ್ಯ ಹಾಗೂ ಪ್ರಮುಖ ಇ-ಮೇಲ್ ಕಳುಹಿಸಿದ್ದು, ``ಗೌರವಾನ್ವಿತ ರಾಷ್ಟ್ರಪತಿಯಿಂದ ನನ್ನ ಮೇಲೆ ಬಹಳಷ್ಟು ಒತ್ತಡ ಬರುತ್ತಿದ್ದು, ಸುಚಿಸ್ಮಿತಾಳಿಗೆ ಕೆಲಸ ಕೊಡುವ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಿ' ಎಂದು ಕೋರಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.