ದೇಶ

ಮುಂಬೈಯಲ್ಲಿ ಕರ್ನಾಟಕ ಭವನ

Sumana Upadhyaya

ಬೆಂಗಳೂರು: ಭಾರತದ ವಾಣಿಜ್ಯ ನಗರಿ  ಮುಂಬೈಯಲ್ಲಿ  ಸಹ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇರುವಂತೆ ಕರ್ನಾಟಕ ಭವನ  ಕಟ್ಟಡ ತಲೆ ಎತ್ತಲಿದೆ.

ನವಿ ಮುಂಬೈಯಲ್ಲಿ  ಈ ಕಟ್ಟಡ ನಿರ್ಮಾಣ  ಕಾಮಗಾರಿ ನಡೆಯುತ್ತಿದ್ದು, ಮುಂಬೈಗೆ ಭೇಟಿ ನೀಡುವ ಸಚಿವರು, ಅಧಿಕಾರಿಗಳು ಮತ್ತು ಇತರ ಗಣ್ಯರಿಗೆ  ಅವರ ಕಚೇರಿ ಕೆಲಸಗಳಿಗೆ  ಈ ಭವನ  ಉಪಯುಕ್ತವಾಗಲಿದೆ.

ಮಹಾರಾಷ್ಟ್ರ  ಸರ್ಕಾರ ಏಳು ವರ್ಷಗಳ ಹಿಂದೆ ಕರ್ನಾಟಕಕ್ಕೆ ನೀಡಿದ್ದ 27 ಸಾವಿರ ಚದರಡಿ ಕಟ್ಟಡದಲ್ಲಿ 22 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಭವನ  ನಿರ್ಮಾಣಗೊಳ್ಳುತ್ತಿದೆ. ಇದೀಗ ಈ ಜಾಗ ಕರ್ನಾಟಕ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಅದನ್ನು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಗೆ(ಎಂಎಸ್ ಐಎಲ್)  ಹಸ್ತಾಂತರಿಸಲಾಗಿದೆ. ಅದು ಕಟ್ಟಡ ನಿರ್ಮಾಣ ಕಾಮಗಾರಿಯ  ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಕೆಲಸ ಬಹುತೇಕ ಮುಕ್ತಾಯಗೊಂಡಿದೆ. ವಿದ್ಯುತ್,  ನೀರಿನ ಸಂಪರ್ಕ ಮತ್ತು ಒಳಾಂಗಣ ಕೆಲಸಗಳು ನಡೆಯುತ್ತಿವೆ.  ಇದೇ  ಆಗಸ್ಟ್ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಉದ್ಘಾಟನೆ ಮಾಡಿಸುವುದು ನಮ್ಮ ಉದ್ದೇಶವಾಗಿದೆ ಎಂದು  ಎಂಎಸ್ಐಎಲ್ ನ ಅಧ್ಯಕ್ಷ ಎಂ.ಎಲ್ .ಅನಿಲ್ ಕುಮಾರ್ ತಿಳಿಸಿದ್ದಾರೆ.

ಭವನ  24 ಭಾರೀ ವೆಚ್ಚದ ಕೊಠಡಿಗಳು, 8 ವಿಶೇಷ ಕೋಣೆಗಳು, ಒಂದು  ಸಮ್ಮೇಳನ ಸಭಾಂಗಣ, ಸುಸಜ್ಜಿತ ಪೀಠೋಪಕರಣಗಳನ್ನು ಒಳಗೊಂಡ ಲಾಬಿ, ಜಿಮ್ ಮತ್ತು ಉತ್ತಮ ರೆಸ್ಟೋರೆಂಟ್ ನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು.

ಔಷಧ, ಪ್ರಯಾಣ ಮತ್ತು ನೀರು ಪೂರೈಕೆ  ವ್ಯವಹಾರ ಹೊಂದಿರುವ ಎಂಎಸ್ ಐಎಲ್ ತನ್ನ ಕಚೇರಿಯನ್ನು ಕರ್ನಾಟಕ ಭವನದಲ್ಲಿ ಉನ್ನತ ದರ್ಜೆಗೇರಿಸುವ ಮತ್ತು ಸಂಗ್ರಹ ವ್ಯವಸ್ಥೆಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದೆ. ಭವನವನ್ನು ಕರ್ನಾಟಕದ ವ್ಯಾಪಾರ ಪ್ರದರ್ಶನಗಳಿಗೆ, ವಿಡಿಯೋ  ಕಾನ್ಫರೆನ್ಸ್ ಮತ್ತು ವಾಣಿಜ್ಯ ಸಭೆಗಳನ್ನು ನಡೆಸಲು ಬಳಸಿಕೊಳ್ಳಬಹುದಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದರು.

SCROLL FOR NEXT