ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪರ ಇದೀಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬ್ಯಾಟ್ ಬೀಸಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್ ರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅರುಣ್ ಜೇಟ್ಲಿ ಅವರು, ಸುಷ್ಮಾ ಸ್ವರಾಜ್ ಅವರು ಪ್ರಾಮಾಣಿಕ. ಉತ್ತಮ ಉದ್ದೇಶದಿಂದ ಲಲಿತ್ ಮೋದಿ ಅವರಿಗೆ ನೆರವು ನೀಡಿದ್ದಾರೆ ಎಂದು ತಮ್ಮ ಪಕ್ಷದ ಸಚಿವೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸುಷ್ಮಾ ಸ್ವರಾಜ್ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ನಿರಾಧಾರವಾಗಿವೆ. ಉತ್ತಮ ಉದ್ದೇಶದಿಂದ ನೆರವು ನೀಡಿದ್ದಾಗಿ ಅವರು ಹಾಗೂ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಹಾಗೂ ಪಕ್ಷವು ಏಕ ಅಭಿಪ್ರಾಯ ಹೊಂದಿದೆ. ಅದರಲ್ಲಿ ಅನುಮಾನವೇ ಇಲ್ಲ’ ಎಂದು ಜೇಟ್ಲಿ ತಿಳಿಸಿದ್ದಾರೆ.
ಅಲ್ಲದೇ, ‘ಜಾರಿ ನಿರ್ದೇಶನಾಲಯವು ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಲಲಿತ್ ಮೋದಿ ಅವರಿಗೆ 16 ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಈ ನೋಟಿಸ್ ಗಳಲ್ಲಿ 15 ನೋಟಿಸ್ ಗಳು ಲಲಿತ್ ಮೋದಿರನ್ನು ತಲುಪಿವೆ. ಅಷ್ಟೆ ಅಲ್ಲ ಮೋದಿ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿದ್ದು, ಅದು ಕೂಡ ಜಾರಿಯಲ್ಲಿದೆ ಎಂದು ಜೇಟ್ಲಿ ಸ್ಪಷ್ಟಪಡಿಸಿದರು.