ದೇಶ

ಸಿಯಾಚಿನ್ ನಲ್ಲಿ ಯೋಧರ ಯೋಗ ಪ್ರದರ್ಶನ

Rashmi Kasaragodu

ನವದೆಹಲಿ: ಇದೇ ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಭಾರತೀಯ ಯೋಧರೂ ಸಿದ್ಧಗೊಂಡಿದ್ದಾರೆ. ಇದಕ್ಕೆ ಇವರು ಆರಿಸಿಕೊಂಡಿರುವ ಸ್ಥಳ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಎಂದೇ ಖ್ಯಾತಿ ಪಡೆದಿರುವ ಸಿಯಾಚಿನ್ ಪ್ರದೇಶದಲ್ಲಿ.ಯೋಧರ ಪಡೆ ಅಂತಾರಾಷ್ಟ್ರೀಯ ಯೋಗ ದಿನದಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯೋಗಾಭ್ಯಾಸ ಮಾಡಲಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮುದ್ರ ಮಟ್ಟಕ್ಕಿಂತ ಸುಮಾರು 12,000 ಅಡಿ ಎತ್ತರದಲ್ಲಿರುವ ಸಿಯಾಚಿನ್‍ನಲ್ಲಿ ಈಗಾಗಲೇ
ಯೋಗಾಭ್ಯಾಸಕ್ಕೆ ಸಿದ್ಧತೆ ನಡೆದಿದ್ದು, ಯೋಧರ 500 ತಂಡಗಳು ಭಾಗವಹಿಸಲಿವೆ. ಜತೆಗೆ ಸಮುದ್ರದಾದ್ಯಂತ ಯೋಗ ದಿನಾಚರಣೆ ಕೈಗೊಳ್ಳಲಿದ್ದು, ಹಡಗುಗಳಲ್ಲೂ ಯೋಧರು ಯೋಗ ಮಾಡಲಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಅಮಿತ್ ಶಾಗೆ ಮುಸ್ಲಿಂ ಟೀಚರ್: ಪಟನಾದ ಮೊಯ್ನುಲ್ ಹಕ್ ಕ್ರೀಡಾಂಗಣದಲ್ಲಿ
ಏರ್ಪಡಿಸಲಾಗಿರುವ ಯೋಗದ ವಿಶೇಷ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಮುಸ್ಲಿಂ ಯೋಗ ಗುರು ಹೇಳಿಕೊಡಲಿದ್ದಾರೆ. ಯೋಗ ಪರಿಣಿತ ಮೊಹದ್ ತಮನ್ನಾ ಮತ್ತು ಅಶೋಕ್ ಸರ್ಕಾರ್ ಎಂಬುವರು ಶಾಗೆ ಯೋಗಾಭ್ಯಾಸ ಮಾಡಿಸಲಿದ್ದಾರೆ ಎಂದು ಬಿಹಾರ-ಜಾರ್ಖಂಡ್ ಪತಂಜಲಿ ಯೋಗಪೀಠದ ಉಸ್ತುವಾರಿ ಅಜಿತ್ ಕುಮಾರ್ ಹೇಳಿದ್ದಾರೆ. ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ರಾಜೀವ್ ಪ್ರತಾಪ್ ರೂಢಿ ರಾಧಾ ಮೋಹನ್ ಸಿಂಗ್ ಮತ್ತು ರಾಮ್ ಕಪಿಲ್ ಯಾದವ್ ಸೇರಿದಂತೆ ಬಿಹಾರದ ಹಲವಾರು ರಾಜಕಾರಣಿಗಳು ಈ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

SCROLL FOR NEXT