ಸೈಂಟ್ ಪೀಟರ್ಸ್ ಬರ್ಗ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ವಿಜ್ಞಾನಿಯೊಬ್ಬರಿಗೆ ರಷ್ಯಾದ ಅತ್ಯುನ್ನತ ತಾಂತ್ರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಧನ ನಿರ್ವಹಣೆಗೆ ಸಂಬಂಧಿಸಿ ನಡೆಸಿದ ಮಹತ್ವದ ಸಂಶೋಧನೆ ಹಿನ್ನೆಲೆಯಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರೊ. ಬಾಳಿಗಾ ಹಾಗೂ ಶುಜಿ ನಕಮುರಾ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಶುಕ್ರವಾರ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಎಲ್ ಇಡಿಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಾಗಿ ನಕಮುರಾ ಅವರಿಗೆ ಈಗಾಗಲೇ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ರಷ್ಯಾ ನೀಡುವ ಈ ಅಂತಾರಾಷ್ಟ್ರೀಯ ಇಂಧನ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿಗೆ ಸರಿಸಮಾನವಾಗಿ ಪರಿಗಣಿಸಲಾಗುತ್ತದೆ.
ಯಾರೀ ಜಯಂತ್?:
ಜಯಂತ್ ಬಾಳಿಗಾ ಅವರು ಹುಟ್ಟಿದ್ದು ಚೆನ್ನೈನಲ್ಲಾದರೂ ಮೂಲತಃ ಕರ್ನಾಟಕದವರು. ಅವರ ತಂದೆ ಬಿಎಚ್‍ಎಲ್‍ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರು ಸಮೀಪದ ಜಾಲಹಳ್ಳಿಯಲ್ಲಿ ಬಾಲ್ಯದ ಶಿಕ್ಷಣ ಪಡೆದ ಜಯಂತ್ ಅವರು ಮದ್ರಾಸ್ ಐಐಟಿಯಲ್ಲಿ ಬಿ.ಟೆಕ್ ಮುಗಿಸಿದ್ದಾರೆ. ವಿದ್ಯುತ್‍ಗೆ ಸಂಬಂಧಿಸಿದ ಸೆಮಿಕಂಡಕ್ಟರ್‍ಗೆ ಸಂಬಂಧಿಸಿದ ಸಂಶೋಧನೆಗೆ ಪ್ರೊ. ಜಯಂತ್ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.