ಕೋಲ್ಕತ್ತಾ: ವಿಶ್ವದ 190 ಕ್ಕೂ ಹೆಚ್ಚು ರಾಷ್ಟ್ರಗಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ನಡೆದಿದ್ದರೆ, ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಮಾತ್ರ ಯೋಗ ದಿನಾಚರಣೆ ನಡೆದಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಯೋಗ ದಿನವನ್ನು ಆಚರಿಸದ ಪಾಕಿಸ್ತಾನ ತನ್ನ ನಿಲುವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಪಾಕಿಸ್ತಾನದಲ್ಲಿ ಶಾಂತಿ ನೆಲೆಸುವುದಕ್ಕೆ ಯೋಗ ಸಹಕಾರಿಯಾಗಲಿದೆ ಎಂದು ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನವನ್ನು ಆಚರಿಸಿರುವ 190 ರಾಷ್ಟ್ರಗಳ ಪೈಕಿ 44 ರಾಷ್ಟ್ರಗಳು ಮುಸ್ಲಿಂ ರಾಷ್ಟ್ರಗಳಾಗಿವೆ. ಚೀನಾ, ಲಂಡನ್, ನ್ಯೂಯಾರ್ಕ್ ನಲ್ಲಿ ಯೋಗ ದಿನ ಆಚರಣೆಯಾಗಿದ್ದು ಈ ಎಲ್ಲಾ ರಾಷ್ಟ್ರಗಳು ಯೋಗವನ್ನು ಮಾನವಕುಲದ ಮುಖ್ಯವಾದ ಅಂಶ ಎಂಬುದನ್ನು ಒಪ್ಪಿವೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪಾಕಿಸ್ತಾನವು ಯೋಗ ದಿನಾಚರಣೆ ಮಾಡುವುದಾಗಿ ಈ ಹಿಂದೆ ತಿಳಿಸಿತ್ತು. ಆದರೆ ಏಕಾಏಕಿ ನಿಲ್ಲಿಸಿದೆ. ಪಾಕಿಸ್ತಾನ ತನ್ನ ನಿಲುವಿನ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಿ ಎಂದು ರವಿಶಂಕರ್ ಪ್ರಸಾದ್ ಮನವಿ ಮಾಡಿದ್ದಾರೆ.