ದೇಶ

ಪಕ್ಷದ ವಿಷಯಕ್ಕೆ ಬಂದರೆ ಕಣ್ಣು ಕಿತ್ತು ಹಾಕುತ್ತೇವೆ: ಅಭಿಷೇಕ್ ಬ್ಯಾನರ್ಜಿ

Sumana Upadhyaya

ಕೋಲ್ಕತ್ತಾ: ಕೆಲವೊಮ್ಮೆ ರಾಜಕೀಯ ನಾಯಕರು ಆವೇಶದಲ್ಲಿ ಏನೇನೋ ಮಾತಾಡ್ತಾರೆ. ಅದು ಅತಿರೇಕಕ್ಕೆ ಹೋಗಿ ನಂತರ ಬೇರೆ ರಾಜಕೀಯ ಪಕ್ಷದವರಿಂದ, ಜನರ ಕೈಯಿಂದ ಉಗಿಸ್ಕೊಳ್ತಾರೆ. ಆಮೇಲೆ ಎಚ್ಚೆತ್ತುಕೊಂಡು, ನಾನು ಹಾಗೆ ಹೇಳಿದ್ದಲ್ಲ, ಹೀಗೆ ಹೇಳಿದ್ದು, ಅದನ್ನು ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅಂತೆಲ್ಲ ಸಬೂಬು ಹೇಳುತ್ತಾರೆ.

ಇದೀಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಹೀಗೆ ವಿವಾದಾತ್ಮಕ ಹೇಳಿಕೆ ನೀಡಿ ವಿರೋಧ ಪಕ್ಷದವರ ಕೆಂಗಣ್ಣಿಗೆ  ಗುರಿಯಾಗಿದ್ದಾರೆ. ಇವರು ಬೇರೆ ಯಾರೂ ಅಲ್ಲ, ಪಶ್ಚಿಮ  ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ.

ತೃಣಮೂಲ ಕಾಂಗ್ರೆಸ್  ಆಡಳಿತದ ತಂಟೆಗೆ ಬಂದರೆ, ಪಕ್ಷಕ್ಕೆ ಕೆಡುಕು ಉಂಟುಮಾಡಲು ಪ್ರಯತ್ನಿಸಿದರೆ ಅವರ ಕಣ್ಣುಗಳನ್ನು ಕಿತ್ತು, ತೋಳುಗಳನ್ನು ಕತ್ತರಿಸಿ ಹಾಕುತ್ತೇವೆ ಎಂದು ಅಭಿಷೇಕ್ ಘರ್ಜಿಸಿದ್ದಾರೆ, ಬಸಿರಿಹಟ್ ಪ್ರದೇಶದಲ್ಲಿ ನಿನ್ನೆ ಪಕ್ಷದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರು ಹೀಗೆ ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಮೇಲೆಯೂ ವಾಗ್ದಾಳಿ ನಡೆಸಿದ ಅವರು. ಹೆಚ್ಚಿನ ರಾಜಕೀಯ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾಲಬುಡದಲ್ಲಿ ಬಿದ್ದಿವೆ, ಆದರೆ ಟಿಎಂಸಿ ಮಾತ್ರ ಇಲ್ಲ. ಮೋದಿಯವರು ಹಿಂದೆ ಚಹಾ ಮಾರುತ್ತಿದ್ದರು, ಈಗ ಅವರು ದೇಶವನ್ನೇ ಮಾರಲು ಹೊರಟಿದ್ದಾರೆ. ಪಶ್ಚಿಮ ಬಂಗಾಳ ಜನರ ಸುದ್ದಿಗೆ ಬಂದರೆ ಅವರ ಕಣ್ಣುಗಳನ್ನು ಕಿತ್ತು, ತೋಳುಗಳನ್ನು ಕತ್ತರಿಸಿ ಹಾಕಿಬಿಡುತ್ತೇವೆ ಎಂದು ಗುಡುಗಿದ್ದಾರೆ.
ಬಂಗಾಳ ಜನರ ಭಾವನೆಗೆ ಧಕ್ಕೆ ತಂದರೆ ನಾವು ಸುಮ್ಮನೆ ಬಿಡುವುದಿಲ್ಲ. ಮಮತಾ ಬ್ಯಾನರ್ಜಿಯವರು ಇರುವವರೆಗೆ ಈ ರಾಜ್ಯದ ಜನತೆ ಭಯಪಡುವ ಅವಶ್ಯಕತೆಯಿಲ್ಲ ಎಂಬುದು ಸಂಸತ್ತಿನಲ್ಲಿಯೂ ಸಾಬೀತಾಗಿದೆ ಎಂದು ಅಭಿಷೇಕ್ ಸಭೆಯಲ್ಲಿ ಪಶ್ಚಿಮ ಬಂಗಾಳ ಜನತೆಗೆ ಅಭಯ ನೀಡಿದರು.

ವ್ಯಾಪಕ ಟೀಕೆ: ಅಭಿಷೇಕ್ ಬ್ಯಾನರ್ಜಿಯವರ ಟೀಕೆಗೆ ಎಲ್ಲೆಡೆ ಟೀಕೆಗಳು ಕೇಳಿಬರುತ್ತಿವೆ. ಅಭಿಷೇಕ್ ಅವರ ಹೇಳಿಕೆಯು ತೃಣಮೂಲ ಕಾಂಗ್ರೆಸ್ ನ ಸಂಸ್ಕೃತಿಯನ್ನು ತೋರಿಸುತ್ತದೆ, ಅವರಿಂದ ಇಂತಹ ಮಾತುಗಳನ್ನೇ ನಿರೀಕ್ಷಿಸಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ದಾರ್ಥ್ ನಾಥ್ ಸಿಂಗ್ ತಿಳಿಸಿದ್ದಾರೆ.

ಅಭಿಷೇಕ್ ಅವರ ಪ್ರಚೋದನಾಕಾರಿ ಹೇಳಿಕೆಯು ತೃಣಮೂಲ ಕಾಂಗ್ರೆಸ್ ನ ಮನಸ್ಠಿತಿಯನ್ನು ಬಿಂಬಿಸುತ್ತದೆ ಎಂದು ಸಿಪಿಎಂ ನಾಯಕ ಸುಜನ್ ಚಕ್ರವರ್ತಿ ಹೇಳಿದ್ದಾರೆ.
ಅಭಿಷೇಕ್ ಬ್ಯಾನರ್ಜಿ, ಕಳೆದ ಜನವರಿಯಲ್ಲಿ ಮಿಡ್ನಾಪುರ್ ಜಿಲ್ಲೆಯ ಚಂಡೀಪುರದಲ್ಲಿ ರ್ಯಾಲಿಯೊಂದರಲ್ಲಿ  ವ್ಯಕ್ತಿಯೊಬ್ಬರಿಂದ ಕಪಾಳಮೋಕ್ಷಕ್ಕೆ ಗುರಿಯಾಗಿದ್ದನ್ನು ಮತ್ತು ಪಕ್ಷದ ಮತ್ತೊಬ್ಬ ನಾಯಕ ತಪಸ್ ಪಾಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 

SCROLL FOR NEXT