ಲಂಡನ್: ಬ್ರಿಟನ್ ಜಾರಿಗೆ ತರಲಿರುವ ಹೊಸ ವಲಸೆ ನೀತಿಯಿಂದಾಗಿ ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‍ಎಚ್‍ಎಸ್) ನೇಮಿಸಿರುವ ಭಾರತ ಮತ್ತು ಯುರೋಪ್‍ನ ಇತರೆ ದೇಶಗಳ 30 ಸಾವಿರಕ್ಕಿಂತಲೂ ಹೆಚ್ಚು ನರ್ಸ್ ಗಳು ದೇಶ ಬಿಡುವ ಒತ್ತಡಕ್ಕೆ ಸಿಲುಕಿದ್ದಾರೆ.
ಫಿಲಿಪ್ಪೀನ್ಸ್ ನಂತರ ಭಾರತೀಯರು ಅತಿ ಹೆಚ್ಚಾಗಿದ್ದು 15 ಸಾವಿರಕ್ಕೂ ಹೆಚ್ಚು ಮಂದಿ ಬ್ರಿಟನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ರಿಟನ್‍ನಲ್ಲಿ ನರ್ಸ್‍ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಬ್ರಿಟನ್ ಸರ್ಕಾರ ವಿದೇಶಿ ನರ್ಸ್ ಗಳ ನೇಮಕಾತಿ ಮಾಡುವುದಿಲ್ಲ ಎಂದು ಹಠಮಾರಿ ಧೋರಣೆ ತೋರುತ್ತಿದೆ ಎಂದು ಇಲ್ಲಿನ ರಾಯಲ್ ಕಾಲೇಜ್ ಆಫ್ ನರ್ಸಿಂಗ್ (ಆರ್ ಸಿಎನ್) ಪ್ರಧಾನ ಕಾರ್ಯದರ್ಶಿ ಡಾ.ಪೀಟರ್ ಕಾರ್ಟರ್ ಹೇಳಿದ್ದಾರೆ.
ವಾರ್ಷಿಕ 35 ಸಾವಿರ ಪೌಂಡ್ ವೇತನ ಪಡೆಯಲೇಬೇಕು, ತಪ್ಪಿದಲ್ಲಿ ದೇಶ ಬಿಡಬೇಕೆಂಬ ನಿಯಮ ಸೇರಿ ಹಲವು ಕಠಿಣ ನಿಯಮಗಳನ್ನು ಹೊಸ ವಲಸೆ ನೀತಿಗೆ ಅಳವಡಿಸಲು ಆಡಳಿತಾ ರೂಢ ಪಕ್ಷ ಚಿಂತನೆ ನಡೆಸಿದೆ. ಒಂದು ಕಡೆ ವಿದೇಶಿಗರಿಗೆ ಕಡಿಮೆ ವೇತನ ಮಿತಿ ಹೇರಲು ಹೊರಟಿರುವ ಸರ್ಕಾರ ಮತ್ತೊಂದು ಕಡೆ 6 ವರ್ಷಗಳ ನಂತರ ಹೆಚ್ಚಿನ ವೇತನ ಪಡೆಯಲು ಸಾಧ್ಯವಾಗದಿದ್ದಲ್ಲಿ ದೇಶ ಬಿಡುವಂತೆ ಒತ್ತಡ
ಹೇರುವ ನೀತಿ ರೂಪಿಸುತ್ತಿದೆ. ಈ ಹೊಸ ನಿಯಮ 2011ರಿಂದಲೇ ಕಾರ್ಯರೂಪಕ್ಕೆ ಬರಲಿದ್ದು 2017ಕ್ಕೆ ಮೊದಲ ಬ್ಯಾಚ್ ನರ್ಸ್ ಗಳು ದೇಶ ಬಿಡುವ ಸಾಧ್ಯತೆಗಳಿವೆ.
ಉದ್ಯೋಗ ಕುರಿತು ಇಷ್ಟೊಂದು ಅಭದ್ರತೆ ಇದ್ದರೂ ಎನ್‍ಎಚ್‍ಎಸ್ ಭಾರತದಲ್ಲಿ ಶುಶ್ರೂಷಕಿಯರ ನೇಮಕಾತಿ ಮುಂದುವರಿಸಿದೆ ಎಂದು ಬೆಳಗಾವಿಯಲ್ಲಿ ತರಬೇತಿ ಪಡೆದಿರುವ ಸಂದೀಪ್ ದುಗ್ಗಾನಿ ಎಚ್ಚರಿಸಿದ್ದಾರೆ.