ದೇಶ

ರಂಜಾನ್ ಉಪವಾಸ ಮಾಡದ ಬಾಲಕರ ಗಲ್ಲಿಗೇರಿಸಿದ ಇಸಿಸ್

Srinivasamurthy VN

ಬೈರುತ್: ಮುಸ್ಲಿಂರ ಪವಿತ್ರ ರಂಜಾನ್ ಆಚರಣೆ ವೇಳೆ ಉಪವಾಸವಿರಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಇಬ್ಬರು ಬಾಲಕರನ್ನು ಇಸಿಸ್ ಉಗ್ರರು ಗಲ್ಲಿಗೇರಿಸಿದ್ದಾರೆ.

ಇಸ್ಲಾಂ ಧರ್ಮದ ಪ್ರಕಾರ ಪವಿತ್ರ ರಂಜಾನ್ ವೇಳೆ ಬೆಳಿಗ್ಗೆ ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತವಾಗುವರೆಗೂ ಮುಸ್ಲಿಂ ಹನಿ ನೀರನ್ನು ಕುಡಿಯದೇ ಉಪವಾಸವಿರುವುದು ಸಂಪ್ರದಾಯ. ಆದರೆ, ಈ ನತದೃಷ್ಟ ಬಾಲಕರು ಉಪವಾಸ ತಾಳಲಾರದೆ ಕದ್ದು ಊಟ ಮಾಡಿದರು ಎಂಬ ಕಾರಣವೊಡ್ಡಿ ಉಗ್ರ ಸಂಘಟನೆ ಅವರನ್ನು ಅಮಾನುಷವಾಗಿ ಗಲ್ಲಿಗೇರಿಸಿದೆ.

ಲೆಬೆನಾನ್ ದೇಶದ ಬೈರುತ್ ನಲ್ಲಿರುವ ಡೈರ್ ಇಜೋರ್‌ನ ಮಾಯುದ್ದಿನ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 18 ವರ್ಷದೊಳಗಿನ ಇಬ್ಬರು ಬಾಲಕರನ್ನು ಐಸಿಸ್ ನೇಣು ಹಾಕಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಅಲ್ಲದೆ ಬಾಲಕರನ್ನು ನೇಣುಹಾಕಿದ ಐಸಿಸ್ ಉಗ್ರರು,ಪವಿತ್ರ ರಂಜಾನ್ ವೇಳೆ ಉಪವಾಸ ಮಾಡದೇ ಧರ್ಮಕ್ಕೆ ಧಕ್ಕೆ ತಂದಿದ್ದಾರೆ. ಧರ್ಮಕ್ಕೆ ನ್ಯಾಯ ಒದಗಿಸಿಲ್ಲ ಎಂದು ಶವಗಳ ಬಳಿ ಪತ್ರಿಕಾ ಪ್ರಕಟಣೆಯನ್ನು ನೇತುಹಾಕಿದ್ದಾರೆ. ಸಿರಿಯಾದಲ್ಲಿರುವ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ ಸದಸ್ಯರು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.

ಇಸಿಸ್ ಉಗ್ರರ ಈ ಕೀಳು ಕೃತ್ಯಕ್ಕೆ ವಿಶ್ವಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದು, ಮಾನವೀಯತೆ ಮರೆತು ಬಾಲಕರನ್ನು ಗಲ್ಲಿಗೇರಿಸಿದ ಇಸಿಸ್ ಸಂಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

SCROLL FOR NEXT