ನವದೆಹಲಿ: ಗರಿಗರಿ ಮೀನಿನ ಫ್ರೈಗೆ ರು25, ಮಟನ್ ಕರಿಗೆ 20ರೂ, ಮಟನ್ ಕಟ್ಲೆಟ್ ಗೆ 18 ರೂ, ಮಸಾಲೆ ದೋಸೆಗೆ 6ರೂ, ಬೇಯಿಸಿದ ತರಕಾರಿಗೆ 5ರೂ...
ಯಾವಕಾಲದ ದರದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಕೇಳಬೇಡಿ. ಹಲವು ಸೌಲಭ್ಯಗಳ ಜೊತೆಗೆ ತಿಂಗಳಿಗೆ 1.4 ಲಕ್ಷದಷ್ಟು ಆದಾಯ ಗಳಿಸುವ ನಮ್ಮ ಸಂಸದರಿಗೆ ಸಂಸತ್ ಕ್ಯಾಂಟೀನ್ ನಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಆಹಾರ ಪದಾರ್ಥಗಳ ವಿವರ.
ಬೆಲೆಯೇರಿಕೆಯ ಬಿಸಿಯಿಂದಾಗಿ ಜನ ಸಾಮಾನ್ಯರ ತಟ್ಟೆಯಿಂದ ಮೇಲಿನ ಆಹಾರ ಪದಾರ್ಥಗಳು ಮಾಯವಾಗುತ್ತಿರುವಾಗ ನಮ್ಮ ಸಂಸದರು ಮಾತ್ರ ಅತ್ಯಂತ ಅಗ್ಗದ ದರಕ್ಕೆ ಬಾಯಲ್ಲಿ ನೀರೂರಿಸುವ ಚಿಕನ್ ಮಟನ್, ಮೀನು ತಿನ್ನುತ್ತಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯಡಿ ಸಂಸತ್ ಕ್ಯಾಂಟೀನ್ ಈ ದರದ ಪಟ್ಟಿಯನ್ನು ಪಡೆಯಲಾಗಿದೆ,
ಇಲ್ಲಿ ಫಿಶ್ ಫ್ರೈ ಗೆ ಶೇ.63 ಸಬ್ಸಿಡಿ ಸಿಕ್ಕರೆ, ಮಟನ್ ಸಾಂಬಾರಿಗೆ ಶೇ.67, ಕಟ್ಲೆಟ್ ಗೆ ಶೇ.65, ಬೇಯಿಸಿದ ತರಕಾರಿಗೆ ಶೇ.83, ಮಸಾಲೆ ದೋಸೆಗೆ ಶೇ,75 ರಷ್ಟು ಸಬ್ಸಿಡಿ ಸಿಗುತ್ತಿದೆ. ಕ್ಯಾಂಟಿನ್ ನಲ್ಲಿ ಬೇಯಿಸಿದ ಮೊಟ್ಟಿಯಿಂದ ಹಿಡಿದು ಮಟನ್ ವರೆಗೂ 76 ಬಗೆಯ ತಿನಿಸುಗಳು ಸಿಗುತ್ತಿದ್ದು, ಶೇ. 63 ರಿಂದ ಶೇ.150 ರಷ್ಟು ಸಬ್ಸಿಡಿ ಹೊಂದಿವೆ.