ಕಠ್ಮಂಡು: ಭೀಕರ ಭೂಕಂಪದಿಂದಾಗಿ ತತ್ತರಿಸಿ ಹೋಗಿರುವ ನೇಪಾಳದ ಮರುನಿರ್ಮಾಣಕ್ಕಾಗಿ ಭಾರತ 1 ಶತಕೋಟಿ ಡಾಲರ್ ನೀಡುವುದಾಗಿ ಗುರುವಾರ ಘೋಷಿಸಿದೆ.
ನೇಪಾಳ ಮರುನಿರ್ಮಾಣ ಸಂಬಂಧ ನೇಪಾಳ ಸರ್ಕಾರ ಗುರುವಾರ ಆಯೋಜಿಸಿದ್ದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ನೇಪಾಳ ಮತ್ತೆ ಮರುನಿರ್ಮಾಣವಾಗಲು ಎಲ್ಲರೂ ಕೈಜೋಡಿಸಬೇಕಿದೆ. ನೇಪಾಳ ಮರು ನಿರ್ಮಾಣಕ್ಕೆ ಭಾರತ ಇದೀಗ (ಒಂದು ಬಿಲಿಯನ್ ಡಾಲರ್) 6.3 ಸಾವಿರ ಕೋಟಿ ನೆರವು ನೀಡಲಿದ್ದು, ಮುಂದಿನ 5 ವರ್ಷಗಳಲ್ಲಿ 2 ಬಿಲಿಯನ್ ಡಾಲರ್ ಗೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಏಪ್ರಿಲ್ 25 ರಂದು ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪದಿಂದಾಗಿ 10 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಅಲ್ಲದೆ, ಸಾಕಷ್ಟು ಮಂದಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಭಾರೀ ಭೂಕಂಪದಿಂದಾಗಿ ನೇಪಾಳದ ಪ್ರತಿಷ್ಠಿತ ಪ್ರವಾಸಿ ತಾಣಗಳು ನಾಶಗೊಂಡಿದ್ದವು. ಭೂಕಂಪದಿಂದ ಛಿದ್ರವಾಗಿರುವ ನೇಪಾಳ ಮರುನಿರ್ಮಾಣಕ್ಕೆ ಇದೀಗ 7 ಬಿಲಿಯನ್ ಡಾಲರ್ ಗಳಿಗೂ ಅಧಿಕ ಹಣಬೇಕಿದೆ. ಹೀಗಾಗಿ ನೇಪಾಳ ಸರ್ಕಾರ ಮರುನಿರ್ಮಾಣ ಕಾರ್ಯಕ್ಕಾಗಿ ಹಲವು ಪ್ರಯತ್ನಗಳನ್ನು ನಡೆಸಿದೆ.