ದೇಶ

ತುರ್ತು ಪರಿಸ್ಥಿತಿ ನೆನಪು, ಆಡ್ವಾಣಿ ಮರೆತ ಬಿಜೆಪಿ

Srinivasamurthy VN
ನವದೆಹಲಿ: ತುರ್ತು ಪರಿಸ್ಥಿತಿಯಲ್ಲಿ ಕಿರುಕುಳ ಅನುಭವಿಸಿದ ನಾಯಕರಿಗೆ ಸನ್ಮಾನ ಕೊಟ್ಟ ಆರ್‍ಎಸ್‍ಎಸ್ ಬೆಂಬಲಿತ ಸಂಸ್ಥೆ, ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ದೂರ  ಇಟ್ಟಿದೆ.
40 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿ ವೇಳೆ 19 ತಿಂಗಳ ಕಾಲ ಆಡ್ವಾಣಿ ಅವರು ಜೈಲಿನಲ್ಲಿದ್ದರು. ಆದರೆ ಇವರನ್ನೇ ಬಿಟ್ಟು ಉಳಿದವರನ್ನು ಸನ್ಮಾನಿಸಿದ್ದು ಅಚ್ಚರಿಗೆ ಕಾರಣವಾಗಿದೆ.  ವಿಶೇಷವೆಂದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ನಾಯಕರಿಗೆ ಸನ್ಮಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ವಿವಿಧ ಪತ್ರಿಕೆಗಳಿಗೆ ಸಂದರ್ಶನ ನೀಡಿದ್ದ ಆಡ್ವಾಣಿ ಅವರು, ಮತ್ತೆ ತುರ್ತು ಪರಿಸ್ಥಿತಿ ಬರುವ ಕಾಲ ಸನ್ನಿಹಿತವಾಗಿದೆ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರತಿಪಕ್ಷಗಳು, ಹೌದು, ಮೋದಿ ಅವರ ಕಾಲದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಬರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದವು. ಇದೀಗ ಶ್ಯಾಮ್ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಡ್ವಾಣಿ ಅವರನ್ನು ಕರೆಯದೇ ಇರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಸಂದರ್ಶನಗಳ ಹೇಳಿಕೆಗಳಿಂದಾಗಿ ಬೇಕಂದೇ ಇವರನ್ನು ದೂರ ಇಟ್ಟಿರಬಹುದು ಎಂಬ ಶಂಕೆ ರಾಜಕೀಯ ವಲಯದಿಂದ ವ್ಯಕ್ತವಾಗಿದೆ.
ಮೋದಿ ಟೀಕೆ
ಇದೇ ವೇಳೆ ಇಂದಿರಾ ಗಾಂಧಿ ಜಾರಿಗೊಳಿಸಿದ್ದ ಪರಿಸ್ಥಿತಿ ಭಾರತದ `ಕರಾಳ ದಿನಗಳು' ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಹೊಸಕಿಹಾಕಿತು ಎಂದು  ಟೀಕಿಸಿದ್ದಾರೆ. ಅಧಿಕಾರಕ್ಕಾಗಿ ಇಡೀ ದೇಶವನ್ನು ಬಂಧನದಲ್ಲಿಡಲಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಹಲವು ಘಟನೆಗಳನ್ನು ಸ್ಮರಣೆಗೆ ತರಲಿದ್ದು ತುರ್ತು ಪರಿಸ್ಥಿತಿ ವಿರೋಧಿ  ಚಳವಳಿಯಿಂದ ಯುವಕರು ಸಾಕಷ್ಟು ಕಲಿತರು. ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಬೇಕೆಂಬ ಒಂದೇ ಗುರಿಯೊಂದಿಗೆ ಹಲವಾರು ಮುಖಂಡರು, ಸಂಘಟನೆಗಳು, ರಾಜಕೀಯ ಪಕ್ಷಗಳು ಜೊತೆ  ಕೆಲಸ ಮಾಡಿದರು ಎಂದಿದ್ದಾರೆ.
ಕಾಂಗ್ರೆಸ್ ತಿರುಗೇಟು
ಮೋದಿ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಸದ್ಯ ದೇಶದಲ್ಲಿ `ಅಘೋಷಿತ ತುರ್ತುಪರಿಸ್ಥಿತಿ' ಹೇರಿದೆ ಎಂದಿದೆ. 40 ವರ್ಷಗಳ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಹಲವು ಎನ್‍ಡಿಎ ಮುಖಂಡರು ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರರಾದ ಶೋಭಾ ಓಜಾ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.
SCROLL FOR NEXT