ಮುಂಬೈ: ಜೈಲಿನಲ್ಲಿರುವ ಭೂಗತ ಪಾತಕಿ ಅಬು ಸಲೇಂನನ್ನು ಮದುವೆಯಾಗಲು ನನಗೆ ಅವಕಾಶ ಕೊಡಿ ಎಂದು ಮುಂಬೈ ಮೂಲದ ಯುವತಿಯೊಬ್ಬರು ಟಾಡಾ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಅಬು ಸಲೇಂ ಜತೆ ಈಗಾಗಲೇ ನನ್ನ 'ನಿಖಾ' ಆಗಿದೆ ಎಂದು ಕೂಡಾ ಅರ್ಜಿಯಲ್ಲಿ ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೆ ಒಂದು ವೇಳೆ ಅಬು ಸಲೇಂನನ್ನು ಮದುವೆಯಾಗಲು ಅನುಮತಿ ನಿರಾಕರಿಸಿದರೆ, ತಾನು ಕೋರ್ಟಿನ ಮುಂದೆಯೇ ಆತ್ಮಹತ್ಯೆಗೆ ಶರಣಾಗುವುದಾಗಿ 25 ವರ್ಷದ ಸಯ್ಯೀದ್ ಬಹಾರ್ ಕೌಸರ್ ಬೆದರಿಕೆ ಹಾಕಿದ್ದಾರೆ.
ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅಬು ಸಲೇಂ ಜೊತೆ ನನ್ನ ‘ನಿಖಾ' ಆಗಿಬಿಟ್ಟಿದೆ. ನನ್ನ ಕುಟುಂಬಸ್ಥರು, ಬಂಧು ಮಿತ್ರರು ನನಗೆ ನೆರವಾಗುತ್ತಿಲ್ಲ. ಈಗ ಸಲೇಂನನ್ನು ವಿವಾಹ ನೋಂದಣಿ ಕಚೇರಿಗೆ ಕರೆಸಿಕೊಂಡು ವಿಶೇಷ ಮದುವೆ ಕಾಯ್ದೆ ಅಡಿಯಲ್ಲಿ ಅಧಿಕೃತವಾಗಿ ನಿಖಾ ಮಾಡಿಸಿಕೊಳ್ಳಬೇಕೆಂದಿದ್ದು, ಇದಕ್ಕೆ ಅನುಮತಿ ನೀಡಬೇಕೆಂದು ಯುವತಿ ಮನವಿ ಮಾಡಿದ್ದಾರೆ. ಅದರೆ, ಈ ಹಿಂದೆ ಇದೇ ಸುದ್ದಿ ಅಬುಸಲೇಂ ಕಿವಿಗೂ ಬಿದ್ದಿತ್ತು. ಯುವತಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸುವಾಗಲೇ 'ಕಬೂಲ್ ಹೇ ಎಂದು ಹೇಳುವ ಮೂಲಕ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾಳೆ ಎಂಬ ಸುದ್ದಿಯನ್ನು ಸಲೇಂ ಹಾಗೂ ಆತನ ವಕೀಲರು ಅಲ್ಲಗೆಳೆದಿದ್ದರು.
1991ರಲ್ಲಿ ಸುಮೈರಾ ಜುಮಾನಿ ವರಿಸಿದ್ದ ಸಲೇಂಗೆ ಒಬ್ಬ ಮಗನಿದ್ದಾನೆ. ಎರಡನೇ ಮದುವೆ ಜನಪ್ರಿಯ ನಟಿಯೊಂದಿಗೆ ಆಗಿತ್ತು ಎನ್ನಲಾಗಿದೆ. ಅದರೆ, ಇದನ್ನು ಅಲ್ಲಗೆಳೆದ ನಟಿ ಸದ್ಯಕ್ಕೆ ಸಿನಿಮಾ ರಂಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ಅಬುಸಲೇಮ್ ಇಲ್ಲಿನ ತಲೋಜಾ ಜೈಲಿನಲ್ಲಿದ್ದಾನೆ.