ಶ್ರೀನಗರ: ಕಳೆದ ವರ್ಷ ಕಾಶ್ಮೀರದಲ್ಲಿ ಉಂಟಾದ ಭೀಕರ ಪ್ರವಾಹದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ರಕ್ಷಣಾ ಸಚಿವಾಲಯ ಕೇಳಿದ ಬಿಲ್ ಮೊತ್ತ ಬರೋಬ್ಬರಿ ರು.500 ಕೋಟಿ!
ಇದನ್ನು ಕೇಂದ್ರ ಸರ್ಕಾರ ತೀರಿಸಿದ್ದು ಹೇಗೆ ಗೊತ್ತಾ? ರಾಜ್ಯ ವಿಪತ್ತು ಪರಿಹಾರ ನಿಧಿಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ನೀಡಲಾದ ರು.1,602 ಕೋಟಿಯಿಂದಲೇ ಈ ಮೊತ್ತವನ್ನು ಕಳೆದು ಕೊಟ್ಟಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ಕಾಶ್ಮೀರ ಪ್ರವಾಹದಲ್ಲಿ 300 ಮಂದಿ ಮೃತಪಟ್ಟು, 15 ಲಕ್ಷ ಮಂದಿ ನಿರ್ವಸಿತರಾಗಿದ್ದರು. ವಿದೇಶಿ ಪ್ರವಾಸಿಗರು ಸೇರಿದಂತೆ ಅನೇಕರನ್ನು ರಕ್ಷಣಾ ಪಡೆಗಳು ರಕ್ಷಿಸಿದ್ದವು. ಜತೆಗೆ ಅವರಿಗೆ ಆಹಾರ, ನೀರು, ಔಷಧಗಳನ್ನು ಹೆಲಿಕಾಪ್ಟರ್ ಮೂಲಕ ಕಲ್ಪಿಸಿದ್ದರು. ಈ ಎಲ್ಲ ಸೇವೆಗಳಿಗಾಗಿ ಸಚಿವಾಲಯವು ರು.500 ಕೋಟಿಯ ಬಿಲ್ ಸಿದ್ಧಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ನೆರವಿನ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಗೃಹ ಸಚಿವಾಲಯ, ಈ ಹಣ ವನ್ನು ರಾಜ್ಯ ಸರ್ಕಾರಕ್ಕೆ ನೀಡಿದ ನೆರವಿನಿಂದಲೇ ಕಡಿತಗೊಳಿಸುವುದಾಗಿ ತಿಳಿಸಿತ್ತು.