ನವದೆಹಲಿ: ನೀವು ಕೋಳಿ ಅಂಕದ ಬಗ್ಗೆ ಕೇಳಿರಬಹುದು. ಕಾಲಿಗೆ ಸಣ್ಣ ಚೂರಿ ಕಟ್ಟಿಕೊಂಡು ಕೋಳಿಗಳು ಪರಸ್ಪರ ಕಾದಾಡುವುದನ್ನೂ ನೋಡಿರಬಹುದು. ಆದರೆ ನಾಯಿ ಅಂಕದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?
ಈಗ ಕೇಳಿ. ಇದೇನೂ ವಿದೇಶದ ಕಥೆಯಲ್ಲ, ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯ ಹೊರವಲಯದಲ್ಲಿರುವ ಗುರ್ ಗಾಂವ್, ನೋಯ್ಡಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿನಿತ್ಯ ನಾಯಿ ಅಂಕಗಳು ನಡೆಯುತ್ತಿವೆಯಂತೆ. ಇಲ್ಲಿನ ತೋಟದ ಮನೆಗಳಲ್ಲಿ ನಾಯಿ ಅಂಕಗಳು ಮನರಂಜನೆಯ ಒಂದು ಭಾಗವಂತೆ.
ಮೊದಲು ಪಂಜಾಬ್, ಹರ್ಯಾಣದ ಗ್ರಾಮೀಣ ಪ್ರದೇಶದಲ್ಲಿದ್ದ ಈ ನಾಯಿ ಕ್ರೀಡೆ ಈಗ ನಗರ ಪ್ರದೇಶಗಳಿಗೂ ವ್ಯಾಪಿಸಿದೆ. ಇಲ್ಲಿ ನಾಯಿಗಳು ಗ್ಲ್ಯಾಡಿಯೇಟರ್ಗಳಂತೆ ಪರಸ್ಪರ ಕಚ್ಚಾಡಿಕೊಳ್ಳುತ್ತವೆ. ಒಮ್ಮೊಮ್ಮೆ ಸಾಯುವ ತನಕವೂ. ಈ ಪ್ರದೇಶಗಳ ಶ್ರೀಮಂತರಿಗೆ ಇದು ಮನರಂಜನೆಯ ಆಟ. ನಾಯಿಗಳ ಕಾದಾಟವನ್ನು ನೋಡಿ ಖುಷಿ ಪಡುವುದೇ ಇವರ ಉದ್ದೇಶ. ಈಗ ಈ ಆಟದ ಹುಚ್ಚು ಎಲ್ಲಿಯವರೆಗೆ ಹೋಗಿದೆಯೆಂದರೆ, ಕೆಲವೊಮ್ಮೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದಿಂದಲೂ ನಾಯಿಗಳನ್ನು ಕಳ್ಳಸಾಗಣೆ ಮೂಲಕ ತರಿಸಲಾಗುತ್ತದೆ. ಇದರಿಂದ ಅಂತಾರಾಷ್ಟ್ರೀಯ ಜಾಲವಾಗಿಯೂಪರಿಣಮಿಸಿದೆ.
ಆಹಾರ ನೀಡದೇ ಹಿಂಸಿಸಲಾಗುತ್ತೆ
ಇಲ್ಲಿ ನಾಯಿಗಳನ್ನು ಗೂಡಿನೊಳಗೆ ಹಾಕಲಾಗುತ್ತವೆ. ಹಲವು ದಿನಗಳ ಕಾಲ ಆಹಾರವನ್ನೂ ನೀಡುವುದಿಲ್ಲ. ಹಸಿವು ತಾಳಲಾರದೆ ನಾಯಿಗಳು ಹುಚ್ಚು ಹಿಡಿದಂತೆ ವರ್ತಿಸುತ್ತವೆ. ನಂತರ ಒಮ್ಮೆಲೇ ಗೂಡಿನ ಬಾಗಿಲು ತೆಗೆದು ಕಾದಾಟಕ್ಕೆ ಬಿಡಲಾಗುತ್ತದೆ. ಅದಕ್ಕೂ ಮೊದಲು ಕಾದಾಟದಲ್ಲಿ ಸುಲಭವಾಗಿ ಸೋಲಬಾರದು ಎಂಬ ಉದ್ದೇಶದಿಂದ ನಾಯಿಗಳ ಕಿವಿಗಳು ಮತ್ತು ಬಾಲವನ್ನು ಕತ್ತರಿಸಲಾಗುತ್ತದೆ. ನಾಯಿ ಅಂಕ ನಡೆಯುವಾಗ ಗೆಲ್ಲುವ ನಾಯಿಯ ಮೇಲೆ ಲಕ್ಷಾಂತರ ರುಪಾಯಿಗಳ ಬೆಟ್ಟಿಂಗ್ ಕಟ್ಟಲಾಗುತ್ತದೆ. ಇಲ್ಲಿ ಈ ಮೂಕಪ್ರಾಣಿಯ ರಕ್ತ ಸುರಿದಂತೆ ಅಲ್ಲಿ ಬೆಟ್ಟಿಂಗ್‍ನ ಮೊತ್ತ ಹೆಚ್ಚುತ್ತಾ ಹೋಗುತ್ತದೆ.
-ನಾಯಿ ಅಂಕವು ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಸ್ಪಷ್ಟ ಉಲ್ಲಂಘನೆ
-ಕಾಯ್ದೆ ಉಲ್ಲಂಘಿಸಿದರೆ 3 ತಿಂಗಳ ಜೈಲು ಮತ್ತು ದಂಡ
-ಭಾರತದಲ್ಲಿ ಜೂಜು ಮತ್ತು ಬೆಟ್ಟಿಂಗ್‍ಗೆ ಅವಕಾಶವಿಲ್ಲ
ಮೂರು ವರ್ಷಗಳ ಹಿಂದೆಯೇ ನನಗೆ ಈ ವಿಚಾರ ಗೊತ್ತಿತ್ತು. ಸಾಮಾನ್ಯವಾಗಿ ನಾಯಿ ಅಂಕ ನಡೆಯುವುದು ಫಾರ್ಮ್ ಹೌಸ್ ಗಳಲ್ಲಿ. ವಿಪರ್ಯಾಸವೆಂದರೆ, ಆಟ ಆರಂಭವಾಗುವ ಮುನ್ನ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡಲಾಗುತ್ತದೆ.
-ಮನೇಕಾ ಗಾಂಧಿ, ಕೇಂದ್ರ ಸಚಿವೆ